ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಬ್ಬರ ಬಂಧನ: ಐಸಿಸ್​ ಜತೆಗಿನ ನಂಟಿಗೆ ನಿರುದ್ಯೋಗ ಸಮಸ್ಯೆಯೇ ಕಾರಣ ಎಂದ ನಲಪಾಡ್​

nalpad
Published on

ಮೈಸೂರು: ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಉಗ್ರ ಸಂಟನೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇದು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ಮೊಹಮ್ಮದ್​ ನಲಪಾಡ್​, ಶಿವಮೊಗ್ಗದ ಯುವಕರು ಐಸಿಸ್​ ಸಂಘಟನೆಯೊಂದಿಗೆ ನಂಟು ಹೊಂದಲು ನಿರುದ್ಯೋಗ ಸಮಸ್ಯೆ ಕಾರಣ ಎಂದು ವ್ಯಾಖ್ಯಾನಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್​, ನಿರುದ್ಯೋಗದಿಂದ ರಾಜ್ಯದಲ್ಲಿ ಯುವಕರು ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ. ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲು ವಿಫಲವಾಗಿದೆ. ಇದಕ್ಕೆ ಈ ಸರ್ಕಾರವೇ ಹೊಣೆ. ಕೆಲಸ ಸಿಕ್ಕಿದ್ದರೆ ಯುವಕರು ತಪ್ಪು ದಾರಿ ತುಳಿಯುವ ಯೋಚನೆ ಮಾಡುತ್ತಿರಲಿಲ್ಲ. ಐಸಿಸ್​ ಸಂಪರ್ಕದಲ್ಲಿ ಇರುವವರನ್ನು ಭಾರತದಲ್ಲಿ ಇಟ್ಟುಕೊಳ್ಳಬೇಡಿ, ಅವರಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಆಗ್ರಹಿಸಿದರು.

2023ರವರೆಗೆ ಯುವಕರು ತಾಳ್ಮೆಯಿಂದ ಇರಬೇಕು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಆ ಸಂದರ್ಭ ರಾಜ್ಯದಲ್ಲಿ ಸುವರ್ಣ ಕಾಲ ನಿರ್ಮಾಣ ಆಗಲಿದೆ. ಹಾಗಾಗಿ ಯುವಕರು ತಪ್ಪು ದಾರಿ ತುಳಿಯುವ ಕಾರ್ಯ ಮಾಡಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net