ನಿನ್ಗೆ ಒಳ್ಳೇದಾಗ್ಲಿ, ಅವಧಿಗೂ ಮೊದ್ಲೇ ಚುನಾವಣೆ ಬೇಡ, ಈ ಸರ್ಕಾರಕ್ಕೆ ನನ್ನ ಸಹಕಾರ ಇದೆ: ದೇವೇಗೌಡ

devegowda bommai
Published on

ಬೆಂಗಳೂರು: ಯಡಿಯೂರಪ್ಪ ಅವರನ್ನ ದೂರ ಇಟ್ಟು ಸರ್ಕಾರ ರಚನೆ ಮಾಡುವುದು ಕಷ್ಟ. ಈ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನಾನು ಸಪೋರ್ಟ್ ಮಾಡ್ತೀನಿ. ಅವಧಿಗೂ ಮೊದಲೇ ಚುನಾವಣೆಗೆ ಹೋಗುವ ಆಸೆ ನಮಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಎಚ್​.ಡಿ. ದೇವೇಗೌಡ ಭರವಸೆ ನೀಡಿದ್ದಾರೆ.

ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭಾನುವಾರ ಸಿಎಂ ಬೊಮ್ಮಾಯಿ ಅವರು ಭೇಟಿ ನೀಡಿ ಅನೌಪಚಾರಿಕವಾಗಿ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಅವರ ತಂದೆ ಮತ್ತು ಬಸವರಾಜ ಇಬ್ಬರೂ ನಮ್ಮ ಜತೆ ಕೆಲಸ ಮಾಡಿದ್ದಾರೆ. ನನ್ನನ್ನು ಭೇಟಿ ಮಾಡಬೇಕು ಅಂದ್ರು, ಬಾರಪ್ಪ ಎಂದು ಕರೆದೆ, ಬಂದರು. ಒಳ್ಳೆಯ ಕೆಲಸ ಮಾಡು, ಜನತೆಗೆ ಒಳ್ಳೆಯದಾಗಬೇಕು. ನನಗೆ ಕಾಲಿನ ತೊಂದರೆಯಿಂದ ಓಡಾಡಲು ಆಗಲ್ಲ. ನೀರಾವರಿ ವಿಚಾರದಲ್ಲಿ ಸಲಹೆ ಕೇಳಿದ್ರೆ ಕೊಡ್ತೀನಿ. ಎರಡು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಲು ನಮ್ಮಿಂದ ನಿಮಗೆ ಯಾವುದೇ ಸಮಸ್ಯೆ ಆಗಲ್ಲ. ನಿನಗೆ ಒಳ್ಳೆಯದಾಗ್ಲಿ ಎಂದು ಹೇಳಿ ಕಳಿಸಿದೆ ಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ತೆಗೆಯುವಂತೆ ನಾವು ಹೇಳಿಲ್ಲ. ಕೇಂದ್ರದವರು 75 ವರ್ಷ ಆದ ಮೇಲೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪಗೆ ವಿಶೇಷ ಸಂದರ್ಭದಲ್ಲಿ ಎರಡು ವರ್ಷ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೇಂದ್ರದವರು ರಾಜೀನಾಮೆ ಕೊಡಲು ಹೇಳಿ ಬೊಮ್ಮಯಿ ಅವರನ್ನು ಸಿಎಂ ಮಾಡಿದ್ದಾರೆ. ಎರಡು ವರ್ಷ ಪೂರೈಸಲು ನಮ್ಮಿಂದ ಯಾವುದೇ ತೊಂದರೆ ಇಲ್ಲ ಎಂದು ದೇವೇಗೌಡ ಹೇಳಿದರು. ಇದೇ ವೇಳೆ ರಾಜಕಾರಣಕ್ಕೆ ವಯಸ್ಸು ಮುಖ್ಯ ಅಲ್ಲ, ಕೆಲಸ ಮಾಡಲು ಆಸಕ್ತಿ ಮುಖ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net