

ಬೆಂಗಳೂರು: ಯಾವುದೇ ಒತ್ತಡಕ್ಕೆ ಮಣಿದು ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆದಿಲ್ಲ. ಸೋಂಕು ಹೆಚ್ವಿದ್ದರೂ ತೀವ್ರತೆಯಿಲ್ಲ, ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ತಜ್ಞರ ಸಲಹೆ, ಸೃಜಿಸಿದ ಆರೋಗ್ಯ ಸವಲತ್ತುಗಳ ಆಧಾರದಲ್ಲಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವೆಂದು ಅಧಿಕಾರಿಗಳು ಆತ್ಮವಿಶ್ವಾಸ ತುಂಬಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.
ಆರ್ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಸಿಎಂ, ದುಡಿಯುವ ಜನರು, ದೈನಂದಿನ ಆದಾಯದ ಮೇಲೆ ಅಬಲಂಬಿತರಿಗೆ ಕಷ್ಟವಾಗಲಿದೆ ಎಂಬ ಅಭಿಪ್ರಾಯಗಳಿದ್ದವು. ಜೀವ ಉಳಿಸುವ ಜತೆಗೆ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎನ್ನುತ್ತಲೇ ವಾರಾಂತ್ಯದ ಕರ್ಫ್ಯೂ ರದ್ದು ಪಡಿಸುವುದಕ್ಕೆ ಮತ್ತೊಂದು ಪ್ರಬಲ ಕಾರಣವೆಂದು ಸಮಜಾಯಿಷಿ ನೀಡಿದರು.
ಸೋಂಕಿತರ ಚೇತರಿಕೆ, ಆಸ್ಪತ್ರೆಗೆ ದಾಖಲಾಗಿತ್ತಿರುವ ಪ್ರಮಾಣ ಅವಲೋಕಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಜನರದ್ದು. ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆಯಲಾಗಿದೆ ಎಂದು ಮೈಮರೆಯಬಾರದು. ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರಿಸ್ಥಿತಿ ಗಂಭೀರವಾಗದಂತೆ ನೋಡಿಕೊಂಡು ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.