ಸಂಪಾದಕೀಯ | ಭಾರತದ ಸ್ಪಷ್ಟ ಸಂದೇಶ

ವಿಜಯವಾಣಿ
Published on

ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆ ತಳೆದಿದ್ದು, ಯಾವುದೇ ಕಾರಣಕ್ಕೂ ಉಗ್ರವಾದವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಮಾತಿನ ಮೂಲಕ ವಿದೇಶಾಂಗ ಸಚಿವ ಜೈಶಂಕರ್ ವಿಶ್ವಸಂಸ್ಥೆಯಲ್ಲಿ ಮಹತ್ವದ ಸಂದೇಶ ನೀಡಿದ್ದಾರೆ. ಪಾಕಿಸ್ತಾನ ದಶಕಗಳಿಂದಲೂ ಭಯೋತ್ಪಾದನೆಯನ್ನು ಹರಡುತ್ತಿದೆ. ಅಲ್ಲದೆ, ಕಾಶ್ಮೀರದಲ್ಲಿನ ತನ್ನ ಕೃತ್ಯಗಳನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುತ್ತಿದೆ. ಈ ಎಲ್ಲ ವಾಸ್ತವಗಳನ್ನು ಅಂತಾರಾಷ್ಟ್ರೀಯ ಸಮುದಾಯ ಮನಗಾಣಬೇಕಿದ್ದು, ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವರ ಮಾತುಗಳು ಸೂಕ್ತವಾಗಿವೆ. ಅಲ್ಲದೆ, ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ ತೀವ್ರಗೊಳಿಸಲು ಇದು ಸಕಾಲ. ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳನ್ನು ಜಾಗತಿಕ ಸಮುದಾಯ ತೀಕ್ಷ್ಣ ರಾಜತಾಂತ್ರಿಕ ಕ್ರಮಗಳಿಂದ ಸರಿದಾರಿಗೆ ತರಬೇಕಿದೆ.

ಭಾರತ ಹಲವು ದಶಕಗಳಿಂದಲೂ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ. ಮತ್ತು ಇದನ್ನು ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿಸುವ ಬದ್ಧತೆಯನ್ನು ಕೂಡ ವ್ಯಕ್ತಪಡಿಸಿರುವುದು ಗಮನಾರ್ಹ. ಆದರೆ, ಇದು ಕೇವಲ ಭಾರತದ ಹೋರಾಟವಾಗಿರದೆ ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಿ ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿಯಾಗಿ ಸಮರ ಸಾರಬೇಕಿದೆ. ‘ಭಯೋತ್ಪಾದನೆಯನ್ನು ನಾಶಪಡಿಸುವಂಥ ಮೌಲ್ಯಗಳು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿಯೇ ನಾವು ಕಾರ್ಯಪ್ರವೃತ್ತರಾಗಬೇಕು. ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿ ಭಾರತದ ವಿರುದ್ಧದ ಆರ್ಥಿಕ ಯುದ್ಧವೂ ಆಗಿತ್ತು. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಯೋತ್ಪಾದನೆಯ ಬಗ್ಗೆ ಭಾರತ ಶೂನ್ಯ ಸಹಿಷ್ಣುತೆಯ ಸಂದೇಶ ಸಾರಿದೆ.

ಭಯೋತ್ಪಾದಕರಿಗೆ ಶಿಕ್ಷೆಯಿಂದ ಯಾವುದೇ ಕಾರಣಕ್ಕೂ ವಿನಾಯಿತಿ ನೀಡುವುದಿಲ್ಲ. ಈ ಬಗ್ಗೆ ಜಾಗತಿಕ ಸಮುದಾಯವು ಒಗ್ಗೂಡಬೇಕು’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿಶ್ವಸಂಸ್ಥೆಯಲ್ಲಿ ಹೇಳುವ ಮೂಲಕ ಪಾಕ್​ಗೂ ಖಡಕ್ ಸಂದೇಶ ರವಾನಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ‘ದಿ ಹ್ಯೂಮನ್ ಕಾಸ್ಟ್ ಆಫ್ ಟೆರರಿಸಂ’ ಎಂಬ ಶೀರ್ಷಿಕೆಯ ಪ್ರದರ್ಶನದಲ್ಲಿ ವಿಶ್ವದ ವಿವಿಧೆಡೆ ನಡೆಯುತ್ತಿರುವ ಭಯೋತ್ಪಾದನೆ ದಾಳಿಗಳ ಪರಿಣಾಮಗಳನ್ನು ವಿವರಿಸಲಾಗಿದೆ ಮತ್ತು ಅದನ್ನು ಹತ್ತಿಕ್ಕಲು ನಡೆಯುತ್ತಿರುವ ಯತ್ನಗಳನ್ನೂ ಬಿಂಬಿಸಲಾಗಿದೆ ಎಂಬುದು ಗಮನಾರ್ಹ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಹಲ್ಗಾಮ್ಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದೆ ಮತ್ತು ಭಯೋತ್ಪಾದಕರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದೆ.

ಆರ್ಥಿಕ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ಬಲಾಢ್ಯ ದೇಶವಾಗಿರುವ ಚೀನಾ ಕೂಡ ಈ ವಾಸ್ತವವನ್ನು ಅರಿಯಬೇಕಿದೆ. ತನ್ನ ಸ್ವಂತ ಹಿತಾಸಕ್ತಿಗಳಿಗೋಸ್ಕರ ಪಾಕಿಸ್ತಾನವನ್ನು ಮತ್ತು ಅದು ಪ್ರಾಯೋಜಿಸುತ್ತಿರುವ ಭಯೋತ್ಪಾದನೆಯನ್ನು ಬೆಂಬಲಿಸುವುದು ಸರಿಯಲ್ಲ. ಉಗ್ರವಾದದ ಭೀಕರತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಡವಾಗಿಯಾದರೂ ಅರ್ಥವಾಗುತ್ತಿದೆ. ಹಾಗಾಗಿ, ಕೇವಲ ಖಂಡನೆ, ಹೇಳಿಕೆಗಳಿಗೆ ಸೀಮಿತವಾಗದೆ ಜಾಗತಿಕ ನಾಯಕರು ಭಯೋತ್ಪಾದನೆಯ ಆರ್ಥಿಕ ಮೂಲಗಳನ್ನು ಕತ್ತರಿಸಿ ಹಾಕಬೇಕು. ಉಗ್ರ ಸಂಘಟನೆಗಳನ್ನು ನಿಷೇಧಿಸಿ, ಕುಖ್ಯಾತ ಭಯೋತ್ಪಾದಕರನ್ನು, ಆ ಸಂಘಟನೆಗಳ ಇತರ ಸದಸ್ಯರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕು. ಶಾಂತಿಸ್ಥಾಪನೆಯ ಪ್ರಯತ್ನ ಯಶಸ್ವಿಯಾಗಬೇಕಾದರೆ ಉಗ್ರವಾದದ ಅಂತ್ಯ ಆಗಲೇಬೇಕು. ಈ ನಿಟ್ಟಿನಲ್ಲಿ ಭಾರತದ ಸಂಕಲ್ಪ ಶಕ್ತಿಯನ್ನು, ಬದ್ಧತೆಯನ್ನು ಜಾಗತಿಕ ಸಮುದಾಯ ಅರ್ಥ ಮಾಡಿಕೊಂಡು, ಬೆಂಬಲಕ್ಕೆ ನಿಲ್ಲಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net