ನಿನ್ನೆ ಸಂಜೆ ನಾಪತ್ತೆಯಾಗಿದ್ದ ಅಕ್ಕ-ತಂಗಿ ಇಂದು ಶವವಾಗಿ ಪತ್ತೆ! ಅಯ್ಯೋ, ಮಗಳೇ ಇದೆಂಥಾ ಶಿಕ್ಷೆ ಕೊಟ್ಟವ್ವಾ?

sisterd death
Published on

ಚಿಕ್ಕಬಳ್ಳಾಪುರ: ಶನಿವಾರ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ಅಕ್ಕ-ತಂಗಿ ಶವವಾಗಿ ಇಂದು(ಭಾನುವಾರ) ಮಧ್ಯಾಹ್ನ ಪತ್ತೆಯಾಗಿದ್ದಾರೆ.

ಅಗಲಗುರ್ಕಿ ಗ್ರಾಮದ ಅಶ್ವಿನಿ(16) ಮತ್ತು ನಿಶ್ಚಿತಾ(14) ಮೃತ ಅಕ್ಕ-ತಂಗಿ. ಅಕ್ಕ ಅಶ್ವಿನಿ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಗೊತ್ತಾಗಿ ಮಗಳಿಗೆ ಅಪ್ಪ-ಅಮ್ಮ ಬೈದು ಬುದ್ಧಿವಾದ ಹೇಳಿದ್ದರು. ಮನನೊಂದ ಅಶ್ವಿನಿ, ತನ್ನ ತಂಗಿಯನ್ನೂ ಕರೆದುಕೊಂಡು ಮನೆಯಿಂದ ನಿನ್ನೆ ಸಂಜೆ ಹೊರ ಹೋಗಿದ್ದಳು. ರಾತ್ರಿ ಎಷ್ಟೊತ್ತಾದರೂ ಅಕ್ಕ-ತಂಗಿ ಇಬ್ಬರೂ ಮನೆಗೆ ವಾಪಸ್​ ಬಂದಿರಲಿಲ್ಲ. ಮನೆಯವರು ಊರೆಲ್ಲಾ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.

ಇಂದು(ಭಾನುವಾರ) ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಅಕ್ಕ-ತಂಗಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ, ಮಗಳೇ ಇದೆಂಥಾ ಶಿಕ್ಷೆ ಕೊಟ್ಟವ್ವಾ? ನೀನಾದ್ರೂ ಎದ್ದೇಳವ್ವಾ, ಇಬ್ರೂ ನಮ್ಮನ್ನ ಬಿಟ್ಟು ಯಾಕ್ರವ್ವ ಹೋಗಿಬಿಟ್ರಿ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂದೆ-ತಾಯಿ ಬೈದಿದ್ದಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net