ದೇವಾಲಯದಲ್ಲಿ ರಾತ್ರೋರಾತ್ರಿ ಚೌಡೇಶ್ವರಿ ಮೂರ್ತಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು! ಗ್ರಾಮಸ್ಥರಲ್ಲಿ ಆತಂಕ

New Project(19)
Published on

ಚಿಕ್ಕಬಳ್ಳಾಪುರ: ಗ್ರಾಮದೇವತೆ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಕಿಡಿಗೇಡಿಗಳು ಮಂಗಳವಾರ ರಾತ್ರೋರಾತ್ರಿ ಬೆಂಕಿ ಇಟ್ಟು ವಿಕೃತಿ ಮೆರೆದ ಘಟನೆ ಬಾಗೇಪಲ್ಲಿ ತಾಲೂಕಿನ ಮಾಡಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ.

ನಿನ್ನೆ(ಮಂಗಳವಾರ) ಮಾಡಪಲ್ಲಿಯಲ್ಲಿ ಗ್ರಾಮ ದೇವತೆಗಳಿಗೆ ಸಾವಿರಾರು ಭಕ್ತರು ತಂಬಿಟ್ಟಿನ ದೀಪೋತ್ಸವ ನೆರವೇರಿಸಿದ್ದರು. ಗ್ರಾಮದೇವತೆಗಳಿಗೆ ಕುರಿ, ಕೋಣ, ಮೇಕೆಗಳನ್ನು ಬಲಿ ಕೊಟ್ಟು ಸಂಬಂಧಿಕರಿಗೆ ಭೋಜನ ವ್ಯವಸ್ಥೆಯನ್ನೂ ಮಾಡುವ ಆಚರಣೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗಂಗಮ್ಮ, ಸಪ್ಪಲಮ್ಮ, ಸತ್ಯಮ್ಮ, ಗೊಡ್ಡೆಮ್ಮ ದೇವರ ಜತೆ ಊರನ್ನು ಕಾಯುವ ಚೌಡೇಶ್ವರಿ ದೇವಿಯನ್ನು ಮಹಾಶಕ್ತಿ ಎಂದೇ ಗ್ರಾಮಸ್ಥರು ಪೂಜಿಸುತ್ತಿದ್ದಾರೆ. ಪ್ರತಿ ವರ್ಷ ಯುಗಾದಿ ಹಬ್ಬದ ಬಳಿಕ ಗ್ರಾಮದಲ್ಲಿ ದೇವರ ಉತ್ಸವ ನಡೆಸುತ್ತಾರೆ. ಅದೇ ರೀತಿ ಮಂಗಳವಾರ ತಂಬಿಟ್ಟಿನ ದೀಪೋತ್ಸವ ನೆರವೇರಿಸಿದ್ದರು. ಸಂಬಂಧಿಕರಿಗೆ ಮಾಂಸಾಹಾರ ಮಾಡಲಾಗಿತ್ತು.

ಮಂಗಳವಾರ ರಾತ್ರಿ ಚೌಡೇಶ್ವರಿ ದೇವಿ ಉತ್ಸವ ಮೂರ್ತಿಯನ್ನ ಮೆರವಣಿಗೆ ಮಾಡಿ ಮನೆ ಮನೆಯಿಂದ ಪೂಜೆ ಸ್ವೀಕರಿಸಲಾಗಿತ್ತು. ಮಧ್ಯರಾತ್ರಿ 1.40 ಗಂಟೆಗೆ ಉತ್ಸವ ಮೂರ್ತಿಯನ್ನು ಊರ ಹೊರವಲಯದಲ್ಲಿರುವ ದೇಗುಲದಲ್ಲಿ ಇಟ್ಟು ಭಕ್ತರು ವಾಪಸ್​ ಬಂದಿದ್ದರು. ಇದಾದ ಕೆಲವೇ ನಿಮಿಷದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಗ್ರಾಮಸ್ಥರು ಹೋಗುವಷ್ಟರಲ್ಲಿ ದೇವಿಯ ಮೂರ್ತಿ ಭಸ್ಮವಾಗಿದೆ. ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಮೂಲಕ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net