

ಒಟ್ಟಾವಾ: ಪ್ರತಿವರ್ಷ ನವೆಂಬರ್ ತಿಂಗಳನ್ನು 'ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ' ಎಂದು ಆಚರಿಸುವ ನಿರ್ಣಯಕ್ಕೆ ಕೆನಡಾ ಸಂಸತ್ನಲ್ಲಿ ಅಂಗೀಕರಿಸಲಾಗಿದೆ. ಈ ಕುರಿತು ಕೆನಡಾದ ಸಂಸತ್ ಸದಸ್ಯ, ಕರ್ನಾಟಕ ಮೂಲದ ಚಂದ್ರ ಆರ್ಯ ಟ್ವೀಟ್ ಮೂಲಕ ತಿಳಿಸಿದ್ದು, ಸಂತಸ ಹಂಚಿಕೊಂಡಿದ್ದಾರೆ.
ಪ್ರತಿವರ್ಷ ನವೆಂಬರ್ ತಿಂಗಳನ್ನು ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ ಎಂದು ಘೋಷಿಸಬೇಕು ಎಂಬ ನನ್ನ ಖಾಸಗಿ ನಿರ್ಣಯವನ್ನು ಕೆನಡಾದ ಹೌಸ್ ಆಫ್ ಕಾಮನ್ಸ್ ಸರ್ವಾನುಮತದಿಂದ ಅಂಗೀರಿಸಿತು. ಹಿಂದೂ ಪರಂಪರೆಯ ಮನುಕುಲಕ್ಕೆ ಸಿಕ್ಕ ಮನ್ನಣೆ ಇದಾಗಿದೆ ಎಂದು ಟ್ವಿಟರ್ನಲ್ಲಿ ಚಂದ್ರ ಆರ್ಯ ಬರೆದುಕೊಂಡಿದ್ದಾರೆ.
ಕೆನಡಾದ ಸಂಸತ್ ಸದಸ್ಯರಾಗಿರುವ ಚಂದ್ರ ಆರ್ಯ ಅವರು ಕಳೆದ ಮೇ ತಿಂಗಳಲ್ಲಿ ಕೆನಡಾ ಪಾರ್ಲಿಮೆಂಟ್ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಜಗದ್ವಿಖ್ಯಾತಿ ಪಡೆದಿದ್ದರು. ಚಂದ್ರ ಆರ್ಯ ಅವರಲ್ಲಿನ ಕನ್ನಡಾಭಿಮಾನ ಕಂಡು ನಾಡಿನ ಜನತೆ ಹೆಮ್ಮೆ ಪಟ್ಟಿದ್ದಾರೆ. ಅವರ ಭಾಷಣದ ವಿಡಿಯೋ ತುಣುಕನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಪ್ರೀತಿ-ಅಭಿಮಾನದ ಮಳೆಯನ್ನೇ ಸುರಿಸಿದ್ದಾರೆ. ಇದೀಗ 'ರಾಷ್ಟ್ರೀಯ ಹಿಂದೂ ಪಾರಂಪರಿಕ ಮಾಸ' ಆಚರಣೆಯ ನಿರ್ಣಯ ಅಂಗೀಕಾರ ಮಾಡಿಸಿರುವುದು ಮತ್ತಷ್ಟು ಖುಷಿ ನೀಡಿದೆ.
ಕೆನಡಾದಲ್ಲಿ ನೆಲೆಸಿರುವ ಚಂದ್ರ ಆರ್ಯ ಅವರು ಕರ್ನಾಟಕದ ತುಮಕೂರು ಜಿಲ್ಲೆ ಶಿರಾ ತಾಲೂಕು ದ್ವಾರಾಳು ಗ್ರಾಮದ ಮೂಲದವರು. ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿಯ ಪುತ್ರ. ಇವರ ಪಾಲಕರು ಸದ್ಯ ಬೆಂಗಳೂರಲ್ಲಿ ನೆಲೆಸಿದ್ದಾರೆ.