

ಚಾಮರಾಜನಗರ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೊಬ್ಬ ಜಿಗುಪ್ಸೆಗೊಂಡು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಉಪಕಾರಾಗೃಹದಲ್ಲಿ ಸಂಭವಿಸಿದೆ.
ಚಾಮರಾಜನಗರ ತಾಲೂಕು ಉತ್ತುವಳ್ಳಿ ಗ್ರಾಮದ ಮಂಜು(42) ಆತ್ಮಹತ್ಯೆ ಮಾಡಿಕೊಂಡವ. ಪತ್ನಿಯನ್ನು ಕೊಂದಿದ್ದ ಮಂಜುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ನಿತ್ಯ ಕುಡಿದು ಬಂದು ಪತ್ನಿ ಚಿನ್ನತಾಯಮ್ಮ ಜತೆ ಮಂಜು ಗಲಾಟೆ ಮಾಡುತ್ತಿದ್ದ. ಇದನ್ನು ಪ್ರಶ್ನಿದ ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದ. ಈ ಪ್ರಕರಣದಲ್ಲಿ ಮಂಜುಗೆ ಡಿ. 8ರಂದು ಚಾಮರಾಜನಗರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದ ಜಿಗುಪ್ಸೆಗೊಂಡ ಮಂಜು ಜೈಲಿನೊಳಗೆ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಂಜುನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಯತ್ನ ನಡೆಯಿತ್ತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.