

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ಬುಧವಾರ ಅಸ್ತಿತ್ವಕ್ಕೆ ಬಂದಿದೆ. ನೂತನ ಸಂಪುಟದಲ್ಲಿ 29 ಸಚಿವರನ್ನು ಸೇರಿಸಿಕೊಳ್ಳಲಾಗಿದ್ದು, ಮುಖ್ಯಮಂತ್ರಿಯೂ ಸೇರಿದರೆ 30 ಮಂದಿ ಸಚಿವರಾದಂತಾಗುತ್ತದೆ. ನಿಯಮ ಪ್ರಕಾರ, ಇನ್ನೂ ನಾಲ್ವರು ಸಚಿವರನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಈ ಮೂಲಕ, ಈ ವಿಧಾನಸಭೆಯ ಅವಧಿಯಲ್ಲಿ ಬಿಜೆಪಿ ಸರ್ಕಾರದ ಎರಡನೇ ಇನಿಂಗ್ಸ್ ಆರಂಭವಾದಂತಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ, ಮುಂದೇನು ಎಂಬ ಪ್ರಶ್ನೆ ಉದ್ಭವವಾಗಿದ್ದು ಸುಳ್ಳಲ್ಲ. ತರುವಾಯ, ಬಿಜೆಪಿ ಹೈಕಮಾಂಡ್ ಸಾಕಷ್ಟು ಕಸರತ್ತು ನಡೆಸಿ ಬಸವರಾಜ ಬೊಮ್ಮಾಯಿ ಅವರನ್ನು ನೂತನ ಸಿಎಂ ಆಗಿಸಲು ನಿಶ್ಚಯಿಸಿತು. ಬೊಮ್ಮಾಯಿ ದೆಹಲಿಗೆ ಹೋಗಿ, ವರಿಷ್ಠರೊಂದಿಗೆ ಚರ್ಚೆ ನಡೆಸಿ, ಸಂಪುಟ ರಚನೆ ಮಾಡಿದ್ದಾರೆ. ಬಿಎಸ್ವೈ ಸಂಪುಟದಲ್ಲಿದ್ದ ಏಳು ಮಂದಿಯನ್ನು ಕೈಬಿಟ್ಟು, ಆರು ಹೊಸಬರಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ, ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ವಲಸಿಗರಿಗೆ ಸಚಿವ ಸ್ಥಾನ ಮರಳಿ ದಕ್ಕಿದೆ. ಇನ್ನು ಖಾತೆಗಳ ಹಂಚಿಕೆ ಬಾಕಿ ಇದ್ದು, ತ್ವರಿತವಾಗಿ ಆಗುವ ನಿರೀಕ್ಷೆ ಇದೆ. ನೂತನ ಸಚಿವ ಸಂಪುಟದ ಮೊದಲ ಔಪಚಾರಿಕ ಸಭೆ ಬುಧವಾರವೇ ನಡೆಯಿತು. ಕರೊನಾ ಮತ್ತು ಪ್ರವಾಹ ಪರಿಸ್ಥಿತಿಗೆ ಪರಿಶೀಲನೆ ಜವಾಬ್ದಾರಿ ಸಚಿವರಿಗೆ ಹಂಚಿಕೆ, ಕರೊನಾ ಟಾಸ್ಕ್ಫೋರ್ಸ್ ಪುನಾರಚನೆ, ಪರಿಶಿಷ್ಟ ಪಂಗಡ ವರ್ಗದ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸೃಜನೆ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ಮೇಲ್ವಿಚಾರಣೆ, ಅನುಷ್ಠಾನ ಪರಿಶೀಲನೆಗೆ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ- ಈ ನಿರ್ಣಯಗಳನ್ನು ಮೊದಲ ಸಭೆಯಲ್ಲಿ ಕೈಗೊಳ್ಳಲಾಗಿದೆ.
2023ರ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಅಂದರೆ ಈ ಸರ್ಕಾರಕ್ಕೆ ಇನ್ನು ಉಳಿದಿರುವುದು ಎರಡು ವರ್ಷಕ್ಕಿಂತ ಕಡಿಮೆ ಅವಧಿ. ಅದರಲ್ಲೂ ಬಿಎಸ್ವೈ ಅವಧಿಯಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪದಂತಹ ಪಕ್ಷದ ಆಂತರಿಕ ವಿದ್ಯಮಾನಗಳು ಹಾಗೂ ಪ್ರವಾಹ, ಕರೊನಾದಂತಹ ನೈಸರ್ಗಿಕ ಪ್ರತಿಕೂಲ ಸನ್ನಿವೇಶಗಳು ಕಾಡಿದ್ದರಿಂದಾಗಿ, ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಅಂದುಕೊಂಡಂತೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಆಡಳಿತವನ್ನು ಹಳಿಗೆ ತಂದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ತಕ್ಷಣ ಆಗಬೇಕಿದೆ; ತಳಹಂತದಲ್ಲಿ ಜನಸಾಮಾನ್ಯರ ಕೆಲಸಕಾರ್ಯಗಳು ವಿಳಂಬ ಇಲ್ಲದಂತೆ ಆಗುವಂತೆ ನೋಡಿಕೊಳ್ಳಬೇಕಿದೆ. ಕರೊನಾದಿಂದಾಗಿ ಆರ್ಥಿಕತೆ ಮಂದಗತಿಯಲ್ಲಿದ್ದು, ಚೇತರಿಕೆಗೆ ಇನ್ನೂ ಕಾಲಾವಕಾಶ ಬೇಕು. ಇನ್ನೊಂದೆಡೆ, ಸರ್ಕಾರದ ತೆರಿಗೆ ಸಂಗ್ರಹ ಕೂಡ ಕುಸಿದಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸುವುದು ಕಷ್ಟ. ಆದ್ದರಿಂದ ಸರ್ಕಾರದ ಇಮೇಜನ್ನು ಎತ್ತರಕ್ಕೇರಿಸುವುದು ಸುಲಭವಲ್ಲ. ಸಚಿವರು ಸಹ ಇಂಥ ಸಂದರ್ಭದಲ್ಲಿ ನವೀನವಾಗಿ ಆಲೋಚಿಸಿ, ಯೋಜನೆಗಳನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಈ ಸವಾಲಿನ ಸಮಯವನ್ನು ಸರ್ಕಾರ ಹೇಗೆ ಎದುರಿಸುತ್ತದೆ ಎಂಬುದನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬ ಅಂಶ ಆಳುಗರ ಗಮನದಲ್ಲಿರಬೇಕು.