

ಬೆಂಗಳೂರು: ರೋಡ್ ರೇಜ್ ಘಟನೆಗಳಾದಾಗ ಸಂಯಮ ಕಳೆದುಕೊಳ್ಳದಂತೆ ಸಾರ್ವಜನಿಕರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಂಚಾರದ ವೇಳೆ ಸಣ್ಣಪುಟ್ಟ ವ್ಯತ್ಯಯಗಳಾದಾಗ ವಾಗ್ವಾದ ಮಾಡದೇ ಸಂಯಮದಿಂದ ಇರಿ. ಸಂಯಮ ಕಳೆದುಕೊಳ್ಳುವುದರ ಬದಲು ಬಗೆಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದರು.
ಅನೇಕ ಸಂದರ್ಭಗಳಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ರೋಡ್ ರೇಜ್ ಪ್ರಕರಣಗಳಾಗುತ್ತವೆ. ಅಂಥಹ ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ತೊಂದರೆಗಳಾದ ವಾಹನ ಸವಾರರು/ಸಾರ್ವಜನಿಕರು ಸಂಯಮ ಕಳೆದುಕೊಳ್ಳಬಾರದು. ಪೊಲೀಸ್ ಸಹಾಯವಾಣಿಯಾದ ೧೧೨ ಕರೆ ಮಾಡಿದರೆ ೭ ನಿಮಿಷಗಳೊಳಗೆ ಪೊಲೀಸರು ಸ್ಥಳಕ್ಕೆ ಬರುತ್ತಾರೆ. ಅಥವಾ ನಿಯಮ ಉಲ್ಲಂಘನೆಯ ಫೋಟೋ ತೆಗೆದು ಪಬ್ಲಿಕ್ ಐ ಆ್ಯಪ್‌ನಲ್ಲಿ ಪ್ರಕಟಿಸಿದರೆ ಪೊಲೀಸರು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಅಥವಾ ತೊಂದರೆಯುಂಟು ಮಾಡುವ ವ್ಯಕ್ತಿ ಅಥವಾ ಅವರ ವಾಹನದ ಫೋಟೋ ತೆಗದುಕೊಳ್ಳಿ, ವಾಹನದ ನಂಬರ್ ನೋಟ್ ಮಾಡಿಕೊಳ್ಳಿ. ಪೊಲೀಸರು ಬಂದಾಗ ಘಟನೆಯ ವಿವರ ನೀಡಿ, ಜತೆಗೆ ಎದುರು ವ್ಯಕ್ತಿಗೂ ಸಹ ವಿವರಿಸಲು ಅವಕಾಶ ನೀಡಿ ಎಂದು ಅವರು ತಿಳಿಸಿದರು.
ಅಲ್ಲದೇ ರೋಡ್ ರೇಜ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮುನ್ನ ೧೧೨ ಗೆ ತಿಳಿಸಿ ಏಕೆಂದರೆ ಜಾಲಜಾಣದಲ್ಲಿ ಮೊದಲು ಸಂಬಂಧಪಟ್ಟ ವ್ಯಕ್ತಿಯನ್ನ ಪೊಲೀಸರು ಪತ್ತೆ ಹಚ್ಚಬೇಕಾಗುತ್ತದೆ. ಆದ್ದರಿಂದ ಅದರ ಬದಲು ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೆ ನಾವು ಪರಿಸ್ಥಿತಿಯನ್ನ ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಆಯುಕ್ತರು ತಿಳಿಸಿದರು.