ಸಾಹಿತಿಗಳಿಗೆ ಜೀವ ಬೆದರಿಕೆ ಪ್ರಕರಣ; ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ; ಉನ್ನತಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ

18 Dwd 1 (Dr. G.Parameshwar) - Copy
Published on

ಬೆಂಗಳೂರು:

ಸಾಹಿತಿಗಳಿಗೆ ಮತ್ತು ಲೇಖಕರು ಹಾಗೂ ಚಿಂತಕರಿಗೆ ಜೀವ ಬೆದರಿಕೆಯೊಡ್ಡುತ್ತಿರುವ ಪ್ರಕರಣಗಳನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದ್ದು, ಅವರಿಗೆ ರಕ್ಷಣೆ ನೀಡಲು ಕ್ರಮ ಕೈಗೊಂಡಿದೆ.

ಗೃಹ ಸಚಿವ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಸಾಹಿತಿಗಳ ಅಹವಾಲುಗಳನ್ನು ಆಲಿಸಿದ ಬಳಿಕ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ.

ಕಳೆದ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇದೇ ರೀತಿಯಲ್ಲಿ ಜೀವ ಬೆದರಿಕೆಗಳು ಬಂದಿದ್ದವು. ನಿರ್ಲಕ್ಷಿಸಿದ್ದ ಪರಿಣಾಮವಾಗಿ ಸಾಹಿತಿ ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಯಾಯಿತು ಎಂದು ಸಭೆಯಲ್ಲಿ ಸಾಹಿತಿಗಳು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾವುದೇ ಪ್ರಕರಣವನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ಪತ್ರ ಬರೆದವರು ಯಾರು ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.

ಅಗತ್ಯ ಇದ್ದವರಿಗೆ ಪೊಲೀಸ್ ರಕ್ಷಣೆ ನೀಡಲಾಗಿದೆ. ಈ ಸರ್ಕಾರದಲ್ಲಿ ಯಾರು ಭಯಪಡುವ ಅಗತ್ಯವಿಲ್ಲ. ಎಲ್ಲರೂ ನಿರ್ಭೀತವಾಗಿ ಇರುವಂತ ವಾತಾವರಣ ಸೃಷ್ಟಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಸಾಹಿತಿಗಳಾದ ಸಿದ್ದರಾಮಯ್ಯ, ಡಾ.ಬಂಜಗೆರೆ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ಗನ್ ಮ್ಯಾನ್ ರಕ್ಷಣೆ

ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಾಹಿತಿಗಳ ಜೊತೆಗೆ ಸಭೆ ನಡೆಸಲಾಗಿದೆ. ಅವರಿಗೆ ರಕ್ಷಣೆ ನೀಡುವ ಭರವಸೆ ಕೊಡಲಾಗಿದೆ ಎಂದರು.

ಗಂಭೀರ ಬೆದರಿಕೆ ಬಂದಿರುವವರಿಗೆ ಗನ್ ಮ್ಯಾನ್ ರಕ್ಷಣೆಯನ್ನು ನೀಡಲಾಗಿದೆ. ಬೆದರಿಕೆ ಬಂದ ಪ್ರಕರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು. ಈ ತನಕ ಮೂರ‌್ನಾಲ್ಕು ದೂರುಗಳು ಬಂದಿದ್ದು, ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net