ಗಂಡನನ್ನು ಕಳೆದುಕೊಂಡ ಅಕ್ಕನಿಗೆ ಸಾಂತ್ವನ ಹೇಳಿ ಬರುತ್ತಿದ್ದವ ಪತ್ನಿ ಸಮೇತ ಮಾರ್ಗಮಧ್ಯೆ ದುರಂತ ಸಾವು!

New Project (1)
Published on

ಮುಂಡಗೋಡು: ಗಂಡನನ್ನು ಕಳೆದುಕೊಂಡ ಅಕ್ಕನಿಗೆ ಸಾಂತ್ವನ ಹೇಳಿ ಬರುತ್ತಿದ್ದ ಸಹೋದರ ಮತ್ತು ಅವರ ಪತ್ನಿ ಇಬ್ಬರೂ ಮಾರ್ಗಮಧ್ಯೆ ದುರಂತ ಅಂತ್ಯ ಕಂಡ ಘಟನೆ ಪಟ್ಟಣದ ಹೊರಭಾಗ ಸಂಭವಿಸಿದೆ.

ಬೆಂಗಳೂರಿನ ಯಲಹಂಕಾ ಪೊಲೀಸ್ ಠಾಣೆಯಲ್ಲಿ ವಾಯರಲೇಸ್ ಸೇವೆ ಸಲ್ಲಿಸುತ್ತಿದ್ದ ರಾಜು ವರ್ಗಿಸ್ ವೆಲ್ಲೆಪೆರೆಂಬೀಲ್ (50) ಮತ್ತು ಇವರ ಪತ್ನಿ ಬ್ಲಸಿ ರಾಜು ವೆಲ್ಲೆಪೆರೆಂಬೀಲ್ ಮೃತ ದಂಪತಿ. ರಾಜು ಅವರ ಅಕ್ಕನ ಗಂಡ ತೀರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನ.14ರಂದು ರಾಜು ಹಾಗೂ ಬಸ್ಲಿ ಇಬ್ಬರೂ ಬೆಂಗಳೂರಿನಿಂದ ಮುಂಡಗೋಡು ತಾಲೂಕಿನ ಕರವಳ್ಳಿ ಗ್ರಾಮದಲ್ಲಿರುವ ಅಕ್ಕನ ಮನೆಗೆ ಹೋಗಿ ಸಾಂತ್ವನ ಹೇಳಲು ಆಗಮಿಸಿದ್ದರು. ರಾತ್ರಿ ಆಗಿದ್ದರಿಂದ ಕರವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ್ಯಕ್ಕಾಗಿ ರಾತ್ರಿ 11.30ರ ಸುಮಾರಿಗೆ ಇಂದೂರಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ನಿಯಂತ್ರಣ ತಪ್ಪಿದ ಕಾರು ಕಲಘಟಗಿ ರಸ್ತೆಯಲ್ಲಿನ ಅಮ್ಮಾಜಿ ಕೆರೆಗೆ ಪಲ್ಟಿಯಾಗಿತ್ತು. ಕಾರು ಚಾಲನೆ ಮಾಡುತ್ತಿದ್ದ ಬ್ಲಸಿ, ಕಾರಿನ ಬಾಗಿಲು ತೆಗೆದು ಕಾರಿನಿಂದ ಹೊರಗೆ ಬಂದು ಪ್ರಾಣ ರಕ್ಷಿಸಿಕೊಳ್ಳಲು ಪ್ರಯತ್ನ ನಡೆಸಿದ್ದರಾದೂ ಪ್ರಯೋಜನವಾಗಿಲ್ಲ. ಕೆರೆಯಲ್ಲೇ ಒದ್ದಾಡಿ ಪ್ರಾಣಬಿಟ್ಟದ್ದಾರೆ. ಅತ್ತ ರಾಜು ಕಾರಿನೊಳಗೇ ಶವವಾಗಿದ್ದರು.

ಸೋಮವಾರ ಬೆಳಗ್ಗೆ ವಾಯುವಿಹಾರಕ್ಕೆ ಹಾಗೂ ಗದ್ದೆಗಳಿಗೆ ತೆರಳುತ್ತಿದ್ದ ರೈತರು ಕೆರೆಯಲ್ಲಿ ಕಾರು ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಸಿದ್ದಪ್ಪಾ ಸಿಮಾನಿ, ಪಿಎಸ್ಐಗಳಾದ ಬಸವರಾಜ ಮಬನೂರ, ನಿಂಗಪ್ಪ ಜಕ್ಕಣ್ಣನವರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ಮೃತದೇಹಗಳನ್ನ ಹೊರ ತೆಗೆದು ಶವಾಗಾರಕ್ಕೆ ರವಾನಿಸಿದರು. ಕ್ರೇನ್ ಮೂಲಕ ಕಾರನ್ನು ಕೆರೆಯಿಂದ ಹೊರ ತೆಗೆದರು. ಮುಂಡಗೋಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜು ಅವರು ಸಿಆರ್​ಪಿಎಫ್​ (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ನಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದರು. ಬಳಿಕ ಯಲಹಂಕ ಪೊಲೀಸ್ ವಿಭಾಗದ ವಾಯರಲೇಸ್ ಸೇವೆ ಸಲ್ಲಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net