ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ತಂತ್ರಜ್ಞಾನದ ಮೊರೆ

traffic jam
Published on

ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ನಾವು ತಂತ್ರಜ್ಞಾನದ ಮೊರೆ ಹೋಗಿದ್ದೇವೆ ಎಂದು ನಗರ ಸಂಚಾರ ವಿಭಾಗದ ಪೊಲೀಸ್ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ಹೇಳಿದ್ದಾರೆ.

ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿಸಿಐಸಿ) ಆಯೋಜಿಸಿದ್ದ ಬೆಂಗಳೂರಿನ ಟ್ರಾಫಿಕ್ ಸವಾಲುಗಳ ನಿರ್ವಹಣೆ ಎಂಬ ವಿಶೇಷ ಉಪನ್ಯಾಸ ಮತ್ತು ರಸ್ತೆ ಸುರಕ್ಷತೆ- ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ, ಸುರಕ್ಷತೆ ಹೆಚ್ಚಿಸಿ ವಾಹನ ಸಂಚಾರ ಸುಗಮವಾಗಿಸಲು ಎಐ, ಬಿಗ್ ಡೇಟಾ ಮತ್ತು ಐಒಟಿ ಆಧಾರಿತ ಪರಿಹಾರಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಜಾರಿಗೆ ತರುವ ಕಾರ್ಯ ಕೈಗೊಂಡಿದ್ದೇವೆ. ಸುರಕ್ಷತೆಯನ್ನು ಸುಧಾರಿಸಲು ಜಂಕ್ಷನ್‌ಗಳಲ್ಲಿ ವಿಳಂಬ ಕಡಿಮೆ ಮಾಡಲು ಕೃತಕ ಬುದ್ಧಿವಂತಿಕೆ(ಎಐ) ಆಧಾರಿತ ಸಿಗ್ನಲ್‌ಗಳು, ಎಐ ಜಾರಿ, ನಿಯಮ ಉಲ್ಲಂಘನೆಗಳನ್ನು ವರದಿ ಮಾಡುವ ಮತ್ತು ಟ್ರಾಫಿಕ್ ನವೀಕರಣಗಳನ್ನು ಪರೀಕ್ಷಿಸುವ ಬಳಕೆದಾರ ಸ್ನೇಹಿ ಡಿಜಿಟಲ್ ವೇದಿಕೆಗಳು, ಪ್ರಮುಖ ತಾಂತ್ರಿಕ ವರ್ಧನೆಯ ಕ್ರಮಗಳು ಮತ್ತು ಉಪಕ್ರಮಗಳು ಅನುಷ್ಠಾನಗೊಂಡಿವೆ. ಅಲ್ಲದೇ ನವೀನ ಪರಿಹಾರಗಳಿಗಾಗಿ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಕೈಗೊಳ್ಳಲಾಗುತ್ತಿದೆ ಎಂದರು.

ವಾಹನ ದಟ್ಟಣೆಯ ಚಲನಶೀಲತೆ-ಅದರ ಕಾರಣಗಳು, ಸ್ಥಳಗಳು ಮತ್ತು ಅದನ್ನು ಕಡಿಮೆ ಮಾಡುವ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ. ಇದನ್ನು ಸಾಧಿಸಲು, ನಾವು ಸುಸ್ಥಿರ ಸಂಚಾರ ನಿರ್ವಹಣೆಗಾಗಿ ಕ್ರಿಯಾಶೀಲ ಬುದ್ಧಿವಂತಿಕೆ (ಅಸ್ಟಾಮ್) ಅನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ವಾಹನ ದಟ್ಟಣೆಯ ಮೇಲ್ವಿಚಾರಣೆ ನಡೆಸಲು ವಿವಿಧ ಮೂಲಗಳಿಂದ ದತ್ತಾಂಶವನ್ನು ಬಳಸಿಕೊಳ್ಳುತ್ತದೆ. ಸಂಚಾರದ ಹರಿವನ್ನು ಮಧ್ಯಮ, ಉನ್ನತ ಮತ್ತು ತೀವ್ರ ಎಂದು ವರ್ಗೀಕರಿಸುವ ಮೂಲಕ, ನಾವು ಪರಿಸ್ಥಿತಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬಹುದು. ಹೆಬ್ಬಾಳದಂತಹ ಕೆಲವು ಜಂಕ್ಷನ್‌ಗಳಲ್ಲಿ ಸತತವಾಗಿ ತೀವ್ರ ವಾಹನ ದಟ್ಟಣೆೆ ಕಂಡುಬರುತ್ತವೆ. ಹೆಬ್ಬಾಳದಲ್ಲಿ ಮೂರು ಗಂಟೆಗಳ ಅವಧಿಯಲ್ಲಿ ೯೦ ಸಾವಿರ ವಾಹನಗಳು ಹಾದು ಹೋಗುತ್ತವೆ. ಬೆಳಗ್ಗೆ ೯ ರಿಂದ ಮಧ್ಯಾಹ್ನ ೧೨ ಗಂಟೆಯರವರೆಗೆ, ಈ ವಾಹನ ದಟ್ಟಣೆ ಪ್ರಮಾಣ ಬಹುಶಃ ಜಾಗತಿಕವಾಗಿ ಅತ್ಯಧಿಕ ದಟ್ಟಣೆಗಳಲ್ಲಿ ಒಂದಾಗಿದೆ. ನಮ್ಮ ಪ್ರಗತಿಯನ್ನು ಬಳಸಿಕೊಂಡು, ಸಂಚಾರ ದಟ್ಟಣೆಯನ್ನು ತಗ್ಗಿಸಲು ನಾವು ಈಗ ನಕ್ಷೆ ಆಧಾರಿತ ಸೇವೆಗಳು, ಎಫ್‌ಎಂ ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನೈಜ-ಸಮಯದ ರಸ್ತೆ ಪರಿಸ್ಥಿತಿಗಳನ್ನು ಪ್ರಸಾರ ಮಾಡಬಹುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net