

ವಿಜಯಪುರ: ಬಿ.ವೈ.ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿರುವ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಗುಮ್ಮಟನಗರಿಯಲ್ಲಿ ರಾಜ್ಯ ನಾಯಕರು ಭಿನ್ನ-ಭಿನ್ನ ಹೇಳಿಕೆ ನೀಡಿದ್ದಾರೆ.
ಸಂತ ಶ್ರೇಷ್ಠ ಕನಕದಾಸ ವೃತ್ತ ಉದ್ಘಾಟನೆ ಹಿನ್ನೆಲೆ ಗುರುವಾರ ನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ಯಾರೂ ನಿರಾಸೆ ಆಗುವ ಅವಶ್ಯಕತೆ ಇಲ್ಲ. ವಿಜಯೇಂದ್ರಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಯಡಿಯೂರಪ್ಪರ ಗೌರವವನ್ನು ಕಡಿಮೆ ಮಾಡಲು, ಶಕ್ತಿ ಕುಗ್ಗಿಸಲು ಯಾರಿಂದಲೂ ಆಗಲ್ಲ. ಅವರ ಸಾಮರ್ಥ್ಯ ಏನೆಂಬುದು ರಾಜ್ಯಕ್ಕೆ ಗೊತ್ತಿದೆ. ಬಿಎಸ್ವೈ ಅವರು ನನ್ನ ತಂದೆಯ ಸಮಾನ ಎಂದು ಬಣ್ಣಿಸಿದರು.
ಸಚಿವ ಎಂಟಿಬಿ ನಾಗರಾಜು ಮಾತನಾಡಿ, ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯೇಂದ್ರ ಶಾಸಕರಾಗಲಿ. ಪಕ್ಷದ ಸಂಘಟನೆ ಮಾಡಲಿ ಎಂದು ಟಿಕೆಟ್ ನೀಡಿರಲಿಕ್ಕಿಲ್ಲ ಎಂಬುದು ನನ್ನ ಊಹೆ. ವಿಜಯೇಂದ್ರಗೆ ಇನ್ನೂ ವಯಸ್ಸಿದೆ, ಯುವಕರಿದ್ದಾರೆ. ಅವರ ತಂದೆಯವರ ಹೆಸರಿದೆ. ಅವರ ತಂದೆ ಮೂರು ಬಾರಿ ಮುಖ್ಯಮಂತ್ರಿ ಆದವರು. ಮುಂದಿನ ದಿನಗಳಲ್ಲಿ ಯುವ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶವೂ ವಿಜಯೇಂದ್ರಗೆ ಇದೆ. ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಕಟ್ಟುತ್ತಾರೆ. ತಂದೆ ಪಕ್ಷ ಕಟ್ಟಿದಂಗೆ, ಮಗ ಕೂಡ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಕಟ್ತಾರೆ ಎಂದರು.
ಇನ್ನು ಸಾಂಪ್ರದಾಯಿಕ ಎದುರಾಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಎಂದಿನಂತೆ ಕಿಡಿಕಾರಿದ್ದು, ವಿಜಯೇಂದ್ರನನ್ನು ಮಾಧ್ಯಮಗಳು ಹೀರೋ ಮಾಡುತ್ತಿವೆ ಎಂದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಟಿವಿ ಮಾಧ್ಯಮಗಳು ವಿಜಯೇಂದ್ರನನ್ನು ಹೀರೋ ಮಾಡಲು ಯತ್ನಾಳ್ನನ್ನು ತುಳಿಯುತ್ತಿದ್ದೀರಿ ಎಂದು ಚುಟುಕಾಗಿ ಉತ್ತರಿಸಿ ನಿರ್ಗಮಿಸಿದರು.