ನಾನು ಅಲ್ಲೇ-ಇಲ್ಲೇ ಸ್ಪರ್ಧಿಸಬೇಕೆಂದಿಲ್ಲ, ರಾಜ್ಯವೇ ನನ್ನ ಕ್ಷೇತ್ರ: ವಿಜಯೇಂದ್ರ

Untitled-2
Published on

ಕೊಪ್ಪಳ: ನಾನು ಅಲ್ಲಿ-ಇಲ್ಲಿ ಸ್ಪರ್ಧಿಸಬೇಕೆಂದಿಲ್ಲ. ಇಡೀ ರಾಜ್ಯವಿದೆ. ಪಕ್ಷ ಸೂಚಿಸಿದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ. ಶಿಕಾರಿಪುರದಿಂದಲೇ ಸ್ಪರ್ಧಿಸಬೇಕೆಂದಿಲ್ಲ. ಇಡೀ ರಾಜ್ಯವೇ ನನ್ನ ಕ್ಷೇತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಗವಿಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಭೇಟಿ ನೀಡಿ ಗವಿಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಇಳಕಲ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ಅಭಿನವ ಬಸವಣ್ಣ ಎಂದು ಖ್ಯಾತರಾದ ಗವಿಶ್ರೀಗಳ ದರ್ಶನ ಪಡೆಯಲು ಕೊಪ್ಪಳಕ್ಕೆ ಬಂದಿರುವೆ. ಇಲ್ಲಿ ಬಂದರೆ ಒಂದು ಸ್ಫೂರ್ತಿ ಸಿಗಲಿದೆ. ಹಾಗಾಗಿ ಬಂದು ಆಶೀರ್ವಾದ ಪಡೆದೆ ಎಂದರು.

ಶಿಕಾರಿಪುರದೊಂದಿಗೆ ನಮ್ಮ ತಂದೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಪಕ್ಷವು ಸೂಕ್ತ ಸಮಯದಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ಯಡಿಯೂರಪ್ಪ ನಲವತ್ತು ವರ್ಷ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷವೂ ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಶಿಕಾರಿಪುರ ಕ್ಷೇತ್ರದ ಜನರ ಅಭಿಪ್ರಾಯದಂತೆ ನನಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾಗಿ ಹೇಳಿದ್ದಾರೆ. ಹೈಕಮಾಂಡ್ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಜನರು ಬಯಸಿದಲ್ಲಿ ಹಾಗೂ ಪಕ್ಷ ಟಿಕೆಟ್ ನೀಡಿದಲ್ಲಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ‌. ಶಿಕಾರಿಪುರದಿಂದಲೇ ಸ್ಪರ್ಧಿಸಬೇಕೆಂದಿಲ್ಲ. ಇಡೀ ರಾಜ್ಯವೇ ನನ್ನ ಕ್ಷೇತ್ರ ಎಂದರು.

ಚುನಾವಣೆಗೆ ಇನ್ನೂ 8 ತಿಂಗಳಿದೆ. ಈಗಲೇ ಕೈ ನಾಯಕರು ಸಿಎಂ ಗಾದಿಗಾಗಿ ಕಿತ್ತಾಡುತ್ತಿರುವುದು ಹಾಸ್ಯಾಸ್ಪದ. ಅವರು ಕಿತ್ತಾಡಿಕೊಳ್ಳಲಿ. ನಮ್ಮ ಸಂಘಟನೆ ನಿರಂತರವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net