10 ರೂ. ಕೊಟ್ಟು ತಂದ ಕೋಳಿಮರಿಗೆ 50 ರೂ. ಬಸ್​ ಟಿಕೆಟ್​!

koli mari cub
Published on

ಹೊಸನಗರ: ಆ ಪುಟ್ಟ ಕೋಳಿ ಮರಿ ಬೆಲೆ 10 ರೂಪಾಯಿ. ಆದ್ರೆ, ಅದರ ಪ್ರಯಾಣಕ್ಕೆ ತೆತ್ತ ಹಣ ಬರೋಬ್ಬರಿ 50 ರೂಪಾಯಿ. ಇಂತಹ ಸ್ವಾರಸ್ಯಕರ ಘಟನೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹೊಸನಗರ ತಾಲೂಕಿನಲ್ಲಿ ಸಂಭವಿಸಿದೆ.

ಹೊಸನಗರದಿಂದ ಬೈಂದೂರು-ಶಿರೂರಿಗೆ ಹೋಗಲು ಅಲೆಮಾರಿ ಕುಟುಂಬದ ಮೂವರು ಶುಕ್ರವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ ಹತ್ತಿದ್ದರು. ಬಸ್ಸಿನ ಕಂಡಕ್ಟರ್​ ಬಂದು ಎಲ್ಲಿಗೆ ಎಂದು ಕೇಳಿದಾಗ 'ಶಿರೂರಿಗೆ ಹೋಗಬೇಕು, ಮೂರು ಟಿಕೆಟ್​ ಕೊಡ್ರಿ' ಅಂದ್ರು. ಆ ವೇಳೆ ಪುಟ್ಟ ಚೀಲದಿಂದ ಚಿವ್​ ಚಿವ್​.. ಶಬ್ದ ಬರುತ್ತಿತ್ತು. ಅದನ್ನು ಆಲಿಸಿದ ಕಂಡಕ್ಟರ್, 'ಅದೇನು?' ಎಂದು ಪ್ರಶ್ನಿಸಿದರು. 'ಅದು ಕೋಳಿ ಮರಿ' ಎಂದು ಆ ಮೂವರು ಪ್ರಯಾಣಿಕರು ಹೇಳುತ್ತಿದ್ದಂತೆ, 'ಅದಕ್ಕೂ ಟಿಕೆಟ್​ ಮಾಡಬೇಕು, ರೂಲ್ಸ್​ ಇದೆ' ಎಂದ ಕಂಡಕ್ಟರ್, ಕೋಳಿ ಮರಿಗೆ ಅರ್ಧ ಚಾರ್ಜ್​ ಅಂದ್ರೆ 50 ರೂಪಾಯಿಯ ಟಿಕೆಟ್​ ಕೊಟ್ಟರು.

ಮುಖಮುಖ ನೋಡಿಕೊಂಡ ಆ ಮೂವರು ಪ್ರಯಾಣಿಕರು, ಬೇರೆ ದಾರಿ ಕಾಣದೆ ಟಿಕೆಟ್​ ಪಡೆದು ಪ್ರಯಾಣಿಸಿದರು. ಆ ಕುಟುಂಬ 10 ರೂ. ಕೊಟ್ಟು ಕೋಳಿ ಮರಿ ತಂದಿತ್ತಂತೆ. ಬಸ್ಸಿನ ಟಿಕೆಟ್​ ದರ ನೋಡಿ ಮೂಗಿಗಿಂತ ಮೂಗುತಿ ಭಾರವಾಯ್ತು ಎಂದು ಗೊಣಗಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net