

ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಾಪದ ಕೂಸು ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.
ಸಿದ್ದರಾಮಯ್ಯರ ಅಪರಾಧದಿಂದ ಇಷ್ಟೆಲ್ಲಾ ಅನಾಹುತವಾಗಿದೆ. ಇಡೀ ದೇಶದ ಜನರು ನಮ್ಮ ಜತೆಗಿದ್ದಾರೆ. ಅದನ್ನು ನೋಡಿ ಸಿದ್ದರಾಮಯ್ಯ ಅವರಿಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ ಮನಬಂದಂತೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ತಪ್ಪಿನ ಅರಿವಾಗಿ ಅವರು ನಾಡಿನ ಜನತೆಯ ಕ್ಷಮೆ ಕೇಳಬೇಕಿತ್ತು. ಈಗಲೂ ಹಗುರವಾಗಿ ಮಾತನಾಡೋದು ನೋಡಿದ್ರೆ ಆಶ್ಚರ್ಯವಾಗುತ್ತೆ. ಈಗಲಾದರೂ ಈ ಬಗ್ಗೆ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಯೋಚಿಸಿ, ಜಾಗೃತರಾಗಲಿ ಎಂದು ಬಿಎಸ್ವೈ ಸಲಹೆ ನೀಡಿದರು.
ಆರ್ಎಸ್ಎಸ್ ಬ್ಯಾನ್ ಮಾಡಬೇಕು ಎಂದಿರುವ ಸಿದ್ದರಾಮಯ್ಯಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಕಲ್ಪನೆ ಇಲ್ಲ. ಇಡೀ ದೇಶದಲ್ಲಿ ಹಿಂದುಗಳ ಸಂಘಟನೆ ಮಾಡುತ್ತಾ ಪ್ರಾಮಾಣಿಕ ಕೆಲಸ ಮಾಡುತ್ತಿರುವ ಆರ್ಎಸ್ಎಸ್ ಬಗ್ಗೆ ನೂರಕ್ಕೆ ತೊಂಬತ್ತು ಜನ ಒಳ್ಳೆಯ ಮಾತನಾಡುತ್ತಾರೆ. ಅಂತ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಯೋಗ್ಯತೆ ತೋರಿಸುತ್ತದೆ. ಅವರು ಏನೇ ಮಾತನಾಡಿದರು ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಗುರವಾಗಿ ಮಾತನಾಡಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಾರೆ ಎಂದರು.