

ಚಾಮರಾಜನಗರ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡಿರುವ "ಭಾರತ್ ಜೋಡೋ ಯಾತ್ರೆ" ಸೆ.30ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ನಡೆದಿದೆ. ಪಟ್ಟಣದ ತುಂಬೆಲ್ಲಾ ಪಕ್ಷದ ವತಿಯಿಂದ ನಾಯಕರ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದ್ದು, ಕೆಡಿಗೇಡಿಗಳು ಗುರುವಾರ ಬೆಳಗ್ಗಿನ ಜಾವ ಫ್ಲೆಕ್ಸ್ಗಳನ್ನ ಹರಿದು ಹಾಕಿದ್ದಾರೆ.
ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಭಿ ಹೋಟೇಲ್‌ನಿಂದ ಊಟಿ ರಸ್ತೆಯ ಉದ್ದಕ್ಕೂ ಅಳವಡಿಸಿದ್ದ ಫ್ಲೆಕ್ಸ್ಗಳಿಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ. ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾವಚಿತ್ರಗಳಿರುವ ಫ್ಲೆಕ್ಸ್ ಅನ್ನು ಹರಿದು ಹಾಕಲಾಗಿದೆ.
ಈ ಕುರಿತು ಗುಂಡ್ಲುಪೇಟೆ ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ "ವಿಜಯವಾಣಿ"ಯೊಂದಿಗೆ ಮಾತನಾಡಿ, ಫ್ಲೆಕ್ಸ್ ಹರಿದುಹಾಕಿ ಗುಂಡ್ಲುಪೇಟೆ ಮಾನ ಹರಾಜು ಮಾಡುತ್ತಿದ್ದಾರೆ. ಕ್ಷೇತ್ರ ಅಭಿವೃದ್ಧಿಯೂ ಆಗುತ್ತಿಲ್ಲ. ಬಿಜೆಪಿಯವರು ದರಿದ್ರ ರಾಜಕೀಯ ಶುರು ಮಾಡಿದ್ದಾರೆ. ಇದಕ್ಕೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರ ಶಿಷ್ಯ ಪ್ರಣಯ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಫ್ಲೆಕ್ಸ್ ಹರಿದು ಹಾಕುವಂತಹ ಹೀನಕೃತ್ಯಗಳನ್ನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೂ ಮಾಡಲ್ಲ. ಫ್ಲೆಕ್ಸ್ ಹಾಕಿರುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮರಾ ಇದ್ದರೆ ಅದನ್ನು ಪರಿಶೀಲಿಸಲಿ, ತಪ್ಪಿಸ್ಥರಿಗೆ ಶಿಕ್ಷೆಯಾಗಲಿ. ಫ್ಲೆಕ್ಸ್ ಹರಿದು ಹಾಕುವುದು ಹೇಡಿಗಳು ಮಾಡೋ ಕೆಲಸ. ಇದಕ್ಕೆ ಕುಮ್ಮಕ್ಕು ಕೊಡುವಷ್ಟು ದೊಡ್ಡವರು ನಾನಲ್ಲ ಎಂದಿದ್ದಾರೆ.