

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಕಾಡಿನ ಮಧ್ಯ ಕೆಸ್ಸಾರ್ಟಿಸಿ ಬಸ್ ಕೆಟ್ಟು ನಿಂತ ಪರಿಣಾಮ 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿದ್ದರಿಂದ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ದಟ್ಟ ಕಾನನದಲ್ಲೇ ಭಾನುವಾರ ಪ್ರಯಾಣಿಕರು ಕಾದು ಕೂರುವಂತಾಯಿತು.
ಮಧ್ಯಾಹ್ನ 2.30 ಗಂಟೆ ಸುಮಾರಿನಲ್ಲಿ ಬೆಟ್ಟದಿಂದ ಯಳಂದೂರಿಗೆ ಆಗಮಿಸುತ್ತಿದ್ದ ಬಸ್ ಬೆಟ್ಟದ ನಡುಮಧ್ಯ ಇರುವ ಜಡೇಸ್ವಾಮಿ ದೇವಸ್ಥಾನದ ಬಳಿ ಕೆಟ್ಟು ನಿಂತಿದೆ. ಭಾನುವಾರವಾಗಿದ್ದರಿಂದ ನೂರಾರು ವಾಹನಗಳು ಬೆಟ್ಟಕ್ಕೆ ಆಗಮಿಸಿದ್ದವು. ಆದರೆ ಇಲ್ಲಿಗೆ ತೆರಳುವ ರಸ್ತೆ ತುಂಬ ಕಿರಿದಾಗಿರುವುದರಿಂದ ಬಸ್, ಕಾರು, ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ವಾಹನ ಸವಾರರು ತೆರಳುವುದು ಕಷ್ಟವಾಯಿತು. ರಸ್ತೆಯ ನಡುವಿನಲ್ಲೇ ಬಸ್ ನಿಂತಿದ್ದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಅಲ್ಲದೆ ಬೆಟ್ಟದಲ್ಲಿ ಮಳೆಯಾಗುತ್ತಿರುವುದರಿಂದ ರಸ್ತೆ ಬದಿಯಲ್ಲಿ ವಾಹನ ಚಲಿಸುವುದು ಕಷ್ಟವಾಗಿತ್ತು. ಹಾಗಾಗಿ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿತು. ಹಾಗಾಗಿ ಟ್ರಾಫಿಕ್ ಜಾಮ್‌ನಿಂದ ಸಾರ್ವಜನಿಕರು ತತ್ತರಿಸುವ ಪರಿಸ್ಥಿತಿ ಉಂಟಾಯಿತು.
ನಂತರ ಇದನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ರಸ್ತೆ ಕಿರಿದಾಗಿದೆ. ಇದನ್ನು ಅಗಲೀಕರಣ ಮಾಡುವತ್ತ ಜನಪ್ರತಿನಿಧಿಗಳು ಅರಣ್ಯ ಇಲಾಖೆ ಕ್ರಮ ವಹಿಸಬೇಕು. ಶನಿವಾರ, ಭಾನುವಾರಗಳಂದು ಇಲ್ಲಿಗೆ ಹೆಚ್ಚು ಜನರು ಆಗಮಿಸುತ್ತಾರೆ. ವಾಹನಗಳ ಸಂಖ್ಯೆ ಏರುಮುಖವಾಗಿರುತ್ತದೆ. ರಸ್ತೆಯ ಮಧ್ಯ ಅರಣ್ಯ ಇಲಾಖೆ ಸಿಬ್ಬಂದಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಇಲ್ಲಿಗೆ ಕೆಸ್ಸಾರ್ಟಿಸಿ ವತಿಯಿಂದ ಗುಣಮಟ್ಟದ ಬಸ್‌ಗಳನ್ನು ಹಾಕಬೇಕು. ರಸ್ತೆ ಬದಿಯಲ್ಲಿ ಮಳೆಯಿಂದ ಕೊರಕಲಾಗಿದ್ದು ಇಲ್ಲಿಗೆ ತಾತ್ಕಾಲಿಕವಾಗಿ ಗ್ರಾವೆಲ್‌ಅನ್ನು ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.