ಉಜ್ವಲ ಕರ್ನಾಟಕ ಅಭಿವೃದ್ಧಿ ನೀಲಿನಕ್ಷೆ

Karnataka
Published on

ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರು ನಾಮಕರಣವಾಗಿ 50 ವರ್ಷ ಪೂರ್ಣಗೊಳಿಸಿ ನವೆಂಬರ್ ಒಂದಕ್ಕೆ 51ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ರಾಜ್ಯ ಸರ್ಕಾರ ‘ಸುವರ್ಣ ಸಂಭ್ರಮ’ದ ಸಮಾರೋಪ ಸಮಾರಂಭ ಆಯೋಜಿಸಿದೆ. ಈ ಹೊತ್ತಿನಲ್ಲಿ ‘ಕರ್ನಾಟಕ ಮುಂದೇನು?’ ಘೋಷ ವಾಕ್ಯದಡಿ ವಿವಿಧ ಕ್ಷೇತ್ರಗಳ ಪರಿಣತರು, ಪ್ರಾಜ್ಞರನ್ನು ‘ವಿಜಯವಾಣಿ’ ಮಾತಿಗೆಳೆದಿದೆ. ನಿಪುಣರ ಅನುಭವ, ವಿಚಾರಧಾರೆಯು ಸರ್ಕಾರ ಹಾಗೂ ಜನ ಸಮುದಾಯಗಳಿಗೆ ಮಾರ್ಗಸೂಚಿಯಷ್ಟೇ ಅಲ್ಲ, ರಾಜ್ಯ ಸಾಗಬೇಕಾದ ದಾರಿಯ ದಿಕ್ಸೂಚಿಯೂ ಹೌದು.

ಶಿಕ್ಷಣದಲ್ಲಿ ಮಾತೃಭಾಷೆಗೆ ಒತ್ತು ನೀಡಿ

  • ಪ್ರಾಥಮಿಕ ಹಂತದಿಂದಲೇ ಮಾತೃ ಭಾಷೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕರ್ನಾಟಕದ ಪ್ರತಿಶತ ನೂರರಷ್ಟು ಶಿಕ್ಷಣ ಒದಗಿಸಲು ಸಾಧ್ಯವಾಗಲಿದೆ.
  • ಕನ್ನಡ ಸಮಾಜದ ಕೌಶಲಗಳು, ವಾತಾವರಣದ ಕೌಶಲ (ದೇಶ- ವಿದೇಶ)ಗಳ ಸಂಗಮವಾಗಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ರೂಪಿಸಬೇಕು.
  • ಜಗತ್ತಿನಲ್ಲಿ ಕಣ್ಮರೆಯಾಗುವ, ಸೃಷ್ಟಿಯಾಗುವ ಉದ್ಯೋಗಗಳ ಮೇಲೆ ವಿಶ್ವ ಆರ್ಥಿಕ ವೇದಿಕೆಯು ಬೆಳಕು ಚೆಲ್ಲುವುದರ ಮೇಲೆ ಗಮನವಿಡಬೇಕು.
  • ಹೊಸ ಉದ್ಯೋಗಗಳಿಗೆ ಬೇಕಾದ ಕೌಶಲ, ತಂತ್ರಜ್ಞಾನ, ವೈದ್ಯಕೀಯತೆ, ಸಂವಹನ, ಭಾಷಾ, ಅನುವಾದ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು.
  • ಶಿಕ್ಷಕರ ಮನೋಭೂಮಿಕೆ ಬದಲಿಸಿ, ಸ್ವತಃ ಕಲಿಯುವಂತಹ ವಾತಾವರಣ ಸ್ವಯಂ ಶಿಕ್ಷಕ ಜತೆಗೆ ಸರ್ಕಾರ, ಸಮಾಜ, ಆಡಳಿತ ನಿರ್ವಿುಸಬೇಕು.
  • ಶಿಕ್ಷಣ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪೂರ್ವ ತಯಾರಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹಾಸುಹೊಕ್ಕಾಗಿಸುವುದು ಅತ್ಯಂತ ಪ್ರಮುಖ.
  • ಕೃತಕ ಬುದ್ಧಿಮತ್ತೆಯ ಮೂಲ ಗಣಿತ (ಅಲ್ಗೊರಿದಮ್​ದಲ್ಲಿದೆ. ಗ್ರಾಮೀಣ ಮಕ್ಕಳಿಗೆ ಸಾಮಾನ್ಯ ಪದವಿ ಜತೆಗೆ ಗಣಿತದಲ್ಲಿ ಆಸಕ್ತಿ ಬೆಳೆಸುವುದು ಅಗತ್ಯ.
  • ಎಕಾನಮಿ ಆಫ್ ವೈಫೈ (ವೈಫೈ ಆರ್ಥಿಕತೆ) ನಗರಗಳಿಂದ ಹಳ್ಳಿಗೂ ವ್ಯಾಪಿಸಿದೆ. ನಮ್ಮ ಶಿಕ್ಷಣದಲ್ಲಿ ವೈಫೈ ಆರ್ಥಿಕತೆಗೆ ಹೆಚ್ಚಿನ ಆದ್ಯತೆ ನೀಡಲು ಒತ್ತು ನೀಡಬೇಕು.
  • ವೃತ್ತಿಪರ ವ್ಯಾಸಂಗ ಮಾಡಿದವರಂತೆ ಬಾಲಕಿಯರು, ರೈತರ ಮಕ್ಕಳು, ಮಾತೃಭಾಷೆ ಕನ್ನಡದಲ್ಲಿ ಕಲಿತವರಿಗೂ ಎಐ, ವೈಫೈ ಎಕಾನಮಿ ಇತ್ಯಾದಿ ಗಳ ಪ್ರೇರಣಾದಾಯಕ ಶಿಕ್ಷಣ ಬೇಕು.
  • ಕಡತಗಳ ಮುಖೇನ ಎಲ್ಲ ಬದಲಾಯಿಸಲಾಗದು. ಶೈಕ್ಷಣಿಕ ಸ್ವಾತಂತ್ರ್ಯ ಕೊಡ ಮಾಡಲು ಪ್ರತಿಯೊಂದು ಹಂತದ ಆಡಳಿತಗಾರರು ಮನಸ್ಸು ಮಾಡಬೇಕು
21ನೇ ಶತಮಾನದ ತುರ್ತು ಅಗತ್ಯವೆಂದರೆ ಅನ್ನ ಗಳಿಸುವ ಶಿಕ್ಷಣ. ಮಾಹಿತಿ-ತಂತ್ರಜ್ಞಾನ, ಉದಯೋನ್ಮುಖ ತಂತ್ರಜ್ಞಾನಗಳ ಕೊಡಮಾಡಿರುವ ವಿಫುಲ ಅವಕಾಶಗಳಿಗೆ ಗ್ರಾಮೀಣ, ನಗರ ಪ್ರದೇಶದ ವಿದ್ಯಾರ್ಥಿ ಸಮೂಹವನ್ನು ಸಜ್ಜುಗೊಳಿಸಿ, ಪ್ರಯೋಜನ ಪಡೆದುಕೊಳ್ಳಬೇಕಾಗಿದೆ.

| ಡಾ.ತೇಜಸ್ವಿ ವಿ.ಕಟ್ಟಿಮನಿ ಉಪ ಕುಲಪತಿ, ಕೇಂದ್ರೀಯ ಬುಡಕಟ್ಟು ವಿ.ವಿ. ಆಂಧ್ರಪ್ರದೇಶ

ಇಂಧನ ಉತ್ಪಾದನಾ ಸಾಮರ್ಥ್ಯ ವೃದ್ಧಿಸಲಿ

ಜಲಮೂಲದ ವಿದ್ಯುತ್ ಅಗ್ಗ, ನಿಗದಿತ ಶುಲ್ಕದ ಗೊಡವೆಯಿಲ್ಲ. ಮುಚ್ಚಿದ ಪಂಪಿಂಗ್ ವ್ಯವಸ್ಥೆ ಮೂಲಕ ಜಲವಿದ್ಯುದಾಗರಗಳಿಗೆ ವರ್ಷಪೂರ್ತಿ ವಿದ್ಯುತ್ ಉತ್ಪಾದನೆ ಖಾತರಿ. ್ಝಲಾನಯನ ಪ್ರದೇಶದ ಕೆಳ ಭಾಗದಲ್ಲಿ ತೇಲುವ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ವೃದ್ಧಿ, ನೀರು ಆವಿಗೆ ತಡೆ, ಕಲ್ಲಿದ್ದಲು ವೆಚ್ಚದ ಹೊರೆ ತಗ್ಗಲಿದೆ. ್ಝದ್ಯುತ್ ಖರೀದಿ ಒಪ್ಪಂದದ ಪ್ರಕಾರ ಕೂಡ್ಲಗಿ ಶಾಖೋತ್ಪನ್ನ ಸ್ಥಾವರದಿಂದ 1,200 (ಶೇ.50) ಮೆಗಾ ವಾಟ್ ಪಡೆಯುವ ಅವಕಾಶ ಸದ್ಬಳಕೆಯಿಂದ ಸಂಕಷ್ಟ ಕಾಲದಲ್ಲಿ ಅನುಕೂಲ. ್ಝಾಜ್ಯ, ಜಿಲ್ಲಾ, ತಾಲೂಕುಮಟ್ಟದ ಸರ್ಕಾರಿ ಕಚೇರಿಗಳಿಗೆ ಹಗಲು ಮಾತ್ರ ವಿದ್ಯುತ್ ಅಗತ್ಯ. ಕಚೇರಿ ಕಟ್ಟಡಗಳ ಸೂರಿನ ಮೇಲೆ ಸೌರಫಲಕ ಅಳವಡಿಸಿದರೆ ಬಹುರೂಪದ ಪ್ರಯೋಜನವಿದೆ. ್ಝಾವಣಗೆರೆ ಸೇರಿ ದೇಶದ ಮೂರು ಸ್ಥಳಗಳಲ್ಲಿ ಎನ್​ಟಿಪಿಸಿಯು ಬಯೋ ಪೆಲೆಟ್ಸ್ (ಜೈವಿಕ ಬಿಲ್ಲೆಗಳು) ಘಟಕಗಳ ಸ್ಥಾಪನೆಗೆ ಉತ್ಸುಕವಾಗಿದ್ದು, ಅತ್ತ ಗಮನಹರಿಸಲಿ.

ಆಧುನಿಕ ಜೀವನ ದಲ್ಲಿ ವಿದ್ಯುತ್ ಅವಿಭಾಜ್ಯ ಅಂಗ, ಆರ್ಥಿಕತೆ ವೃದ್ಧಿಗೆ ಸಂಪರ್ಕ ಕೊಂಡಿ. ಪರಿಸರಹಿತ, ಮುಂದಿನ ಬೇಡಿಕೆ-ಬಳಕೆ ಗಮನದಲ್ಲಿರಿಸಿ ಕೊಂಡು ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆ, ಹೆಚ್ಚಳಕ್ಕೆ ಅನೇಕ ಮಾಗೋಪಾಯಗಳಿವೆ, ಬಳಕೆಗೆ ಇಚ್ಛಾಶಕ್ತಿ ಮುಖ್ಯವಾಗಿದೆ.

| ಎ. ಸತ್ಯಭಾಮ ಇಂಧನ ತಜ್ಞರು

‘ಕರ್ನಾಟಕ ಬ್ರಾ್ಯಂಡ್’ ಅಗತ್ಯ

  • ಒನ್ ಟ್ರಿಲಿಯನ್ ಆರ್ಥಿಕತೆ ಹೇಳಿಕೆ, ಕಾಗದದ ಮೇಲಿನ ನೀಲಿನಕ್ಷೆಗೆ ಸೀಮಿತ ಸಲ್ಲ. ಜನಕೇಂದ್ರಿತ ರೂಪರೇಷೆ ಸಿದ್ಧಪಡಿಸಿ, ಕಾಲಮಿತಿ ಚೌಕಟ್ಟು ಹಾಕಿಕೊಂಡು ಜಾರಿಗೊಳಿಸಬೇಕು.
  • ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಹೀಗೆ ಹಲವು ರಾಜ್ಯಗಳು ತಮ್ಮದೇ ಆದ ಬ್ರಾ್ಯಂಡ್ ಹೊಂದಿದ್ದು, ವಿಶ್ವಮಟ್ಟದಲ್ಲಿ ಸೆಳೆಯುವ ‘ಕರ್ನಾಟಕ ಬ್ರಾ್ಯಂಡ್’ ಅಗತ್ಯವಿದೆ.
  • ‘ಕರ್ನಾಟಕ ಬ್ರಾ್ಯಂಡ್’ ಮುಖೇನ ಮಾನವ ಬಂಡವಾಳಕ್ಕೆ ಪ್ರೋತ್ಸಾಹ, ಪ್ರತಿಭಾಪಲಾಯನ ತಡೆ, ಅನಿವಾಸಿ ಪ್ರತಿಭಾವಂತ ಕನ್ನಡಿಗರನ್ನು ಸೆಳೆಯಲು ಬೇಕಾದ ಉಪಕ್ರಮ.
  • ನಗರ ಕೇಂದ್ರೀಕರಣ ಕ್ರಮ, ಉಪಕ್ರಮಗಳು ಬೆಂಗಳೂರಿನ ಮೇಲೆ ಒತ್ತಡ ಹೇರಿವೆ. ನಗರೀಕರಣ ವಿಕೇಂದ್ರೀಕರಣ, 2 ಮತ್ತು 3ನೇ ದರ್ಜೆ ನಗರಗಳ ಉನ್ನತೀಕರಣಕ್ಕೆ ಆದ್ಯತೆ.
  • ಜಿಎಸ್​ಟಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿರು ವುದು ಗಮನಾರ್ಹ. ಇದರಲ್ಲಿ ಸಿಂಹಪಾಲಿ ರುವ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ವಾಗಿಸಿ ಮೂಲ ಸವಲತ್ತುಗಳ ಸಬಲೀಕರಣ.
ಮಾಹಿತಿ- ಜೈವಿಕ ತಂತ್ರಜ್ಞಾನ ಪ್ರಾಮುಖ್ಯತೆ ನೀಡಬೇಕು. ಅದೇ ಕಾಲಕ್ಕೆ ಅದರಿಂದಲೇ ಎಲ್ಲವೂ ಉದ್ಧಾರವಾಗುವುದಿಲ್ಲ ಎನ್ನುವ ಅರಿವು ಬೇಕು. ವೆಚ್ಚದ ಮರು ವ್ಯಾಖ್ಯಾನ, ಹೂಡಿಕೆಯ ಮಹತ್ವ ತಿಳಿದು, ಆರ್ಥಿಕತೆಯ ಚಾಲಕ ಶಕ್ತಿಗಳಾದ ದುಡಿಯುವ ವರ್ಗಸ್ನೇಹಿ ನೀತಿಗಳು ಮುಖ್ಯ.

| ಪ್ರೊ.ಕಲಾ ಸೀತಾರಾಮನ್ ಶ್ರೀಧರ್ ಐಸೆಕ್ ಪ್ರಾಧ್ಯಾಪಕಿ

ಪ್ರವಾಸೋದ್ಯಮ ಆಕರ್ಷಕವಾಗಲಿ

  • ಹತ್ತಾರು ಮಾದರಿಗಳಿವೆ, ಅನುಷ್ಠಾನದಲ್ಲಿ ಸ್ಥಿರತೆಯಿಲ್ಲ. ವ್ಯವಸ್ಥಿತ, ಕಾರ್ಯಸಾಧುವಾದ ಯೋಜನೆ, ಪ್ರಭಾವಶಾಲಿ ಮಾರ್ಕೆಟಿಂಗ್ ಕಾರ್ಯತಂತ್ರವೇ ಯಶಸ್ಸಿನ ಗುಟ್ಟು.
  • ವಿದೇಶಿ ಪ್ರವಾಸಿಗರನ್ನು ವಾರ್ಷಿಕ ಐದು ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವ ಗುರಿಯಿಟ್ಟುಕೊಂಡು ಕನಿಷ್ಠಪಕ್ಷ 3 ರಿಂದ 5 ವರ್ಷಗಳ ಮುನ್ನಂದಾಜಿನ ಯೋಜನೆ ರೂಪಿಸುವುದು ಅಗತ್ಯ.
  • ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಯಾಗಬೇಕು, ಉನ್ನತಾಧಿಕಾರಿಗಳ ಪದೇಪದೆ ವರ್ಗಾವಣೆ ಸಲ್ಲದು.
  • ನೀತಿಗಳು, ಪ್ರೋತ್ಸಾಹಕಗಳು ಇನ್ನಿತರ ಸವಲತ್ತುಗಳ ಹಳೆಯ ಜಾಡಿನಲ್ಲಿವೆ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಹೊಸತನ, ಆಕರ್ಷಣೆಗಳ ಸಂಖ್ಯೆ ಹೆಚ್ಚಿಸುವುದೂ ಮುಖ್ಯ.
  • ವನ್ಯಜೀವಿ, ಪಾರಂಪರಿಕ ತಾಣ, ನಿಸರ್ಗ ಸೊಬಗು, 320 ಕಿ.ಮೀ. ಉದ್ದದ ಕರಾವಳಿ ಹೀಗೆ ಬೇರೆ ರಾಜ್ಯಗಳಿಗಿಂತಲೂ ಕರ್ನಾಟಕ ಸಂಪದ್ಭರಿತ, ಪ್ರಯತ್ನ ನಿರೀಕ್ಷಿಸಿದಂತಿಲ್ಲ.
  • ಜಲ, ವಾಯು, ಭೂಮಾರ್ಗದ ಸಂಪರ್ಕ, ಪ್ರವಾಸಿ ತಾಣಗಳಿಗೆ ಜೋಡಣೆಯಲ್ಲಿ ದೂರದರ್ಶಿತ್ವ ಕ್ರಮಗಳು ಹೆಚ್ಚೆಚ್ಚು ವಿದೇಶ, ಶ್ರೀಮಂತ ಪ್ರವಾಸಿಗರನ್ನು ಕರೆದು ತರಲಿದೆ.
  • ಕರ್ನಾಟಕ ಇಂಟರ್​ನ್ಯಾಷನಲ್ ಎಕ್ಸ್​ಪೋ, ವಿದೇಶಿ ಟೂರ್ ಆಪರೇಟರ್​ಗಳ ಸಮ್ಮೇಳನ, ದೆಹಲಿ, ಹೈದರಾಬಾದ್ ರೀತಿ ಬೆಂಗಳೂರಿನಲ್ಲಿ ವಿಸಿಟರ್ಸ್ ಕನ್ವೆನ್ಷನ್ ಬೋರ್ಡ್ ಸ್ಥಾಪಿಸಲಿ.
ಪ್ರವಾಸೋದ್ಯಮಕ್ಕೆ ಬಹುಮುಖಿ ಆಯಾಮ. ಬೀದಿಬದಿ ವ್ಯಾಪಾರಿಯಿಂದ ಹಿಡಿದು ವಿದೇಶಿ ವಿನಿಮಯ ಗಳಿಕೆವರೆಗೆ ** ಫಾಯಿದೆಯಿದೆ. ಅದಕ್ಕಿರುವ ಶಕ್ತಿ, ಸಾಮರ್ಥ್ಯವನ್ನು ಸರ್ಕಾರ ಸರಿಯಾಗಿ ಗುರುತಿಸಿ, ಅನುಷ್ಠಾನಕ್ಕೆ ತಂದರೆ ಕರ್ನಾಟಕದೊಳಗೆ ಹಲವು ಜಗತ್ತುಗಳಿರುವುದು ತಿಳಿಯಲಿದೆ.

| ಎಸ್.ಮಹಲಿಂಗಯ್ಯ ಕಾರ್ಯದರ್ಶಿ, ಕರ್ನಾಟಕ ಟೂರಿಸಂ ಸೊಸೈಟಿ

ಯುವ ಸಮುದಾಯದ ಕೌಶಲ ವೃದ್ಧಿಸಲಿ

  • ರಾಜ್ಯದ ನಿವ್ವಳ ಉತ್ಪನ್ನ ದರ (ಜಿಎಸ್​ಡಿಪಿ) ಶೇ.10.2ಕ್ಕೆ ವೃದ್ಧಿಯಾಗಿದೆ. ಇದರಲ್ಲಿ ರಾಜಧಾನಿ ಬೆಂಗಳೂರಿನದು ಸಿಂಹಪಾಲಿದೆ ಎನ್ನುವುದರ ಮೇಲೆ ನಮ್ಮ ಆದ್ಯತೆ ಅವಲಂಬಿತ.
  • ಬೆಂಗಳೂರಿನಾಚೆ ಉದ್ಯಮ, ತಯಾರಿಕೆ ಇತ್ಯಾದಿ ವಲಯಗಳ ಬೆಳವಣಿಗೆ ಉದ್ದೇಶ ಸಮಾನ ಅಭಿವೃದ್ಧಿ, ಲಭ್ಯ ಮಾನವ ಸಂಪನ್ಮೂಲ ಸಮರ್ಪಕ ಬಳಕೆ.
  • ಮಾರುಕಟ್ಟೆ ಪ್ರವೃತ್ತಿ ಅನುಲಕ್ಷಿಸಿ ನವೋದ್ಯಮ, ಉದ್ಯಮಶೀಲತಾ ತರಬೇತಿ, ಬೇಕಿರುವ ಪರಿಣತಿ ಯುವ ಸಮೂಹಕ್ಕೆ ಕಲ್ಪಿಸಿ ಬೇಡಿಕೆ-ಪೂರೈಕೆ ಸರಿದೂಗಿಸುವುದು.
  • ಜಿಡಿಪಿ ಎರಡರಿಂದ ಮೂರುಪಟ್ಟು ವೃದ್ಧಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ಡಿಜಿಟಲ್ ಎಕಾನಮಿ ಆಧಾರಿತ ಮುಂದಿನ 3-4 ವರ್ಷಗಳ ಯೋಜನೆ ಅನುಷ್ಠಾನ.
  • ವಿವಿಧ ರಂಗಗಳಲ್ಲಿ ಸೃಜನೆಯಾಗುವ ಉದ್ಯೋಗಗಳ ಬಳಕೆ ಇಲ್ಲವೇ ಉದ್ಯಮಕ್ಕೆ ಬೇಕಾದದ್ದನ್ನು ಪಠ್ಯಕ್ರಮದಲ್ಲಿ ಅಳವಡಿಸಿದರೆ ಕಾಲೇಜುಮಟ್ಟದಲ್ಲೇ ಉದ್ಯಮಶೀಲರಾಗಬಹುದು.
  • ಪ್ರತಿಭೆ, ಪರಿಣತಿ ಹೊಂದಿದ ಯುವಜನರು ಉದ್ಯೋಗ ಅರಸಿಕೊಂಡು ಹೋಗುವ ಬದಲಿಗೆ ಉದ್ಯೋಗದಾತ ರಾಗಲು ಪ್ರೋತ್ಸಾಹಿಸಿದರೆ ಆರ್ಥಿಕತೆ ವೃದ್ಧಿಗೆ ಆಸರೆ.
  • ಜಿಲ್ಲಾ ಉದ್ಯಮಶೀಲತಾ ಮಿಷನ್ ಸ್ಥಾಪಿಸಿ, ಮುಂದಿನ 5 ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆಗೆ ಗುರಿಯಿಟ್ಟುಕೊಂಡು ಸ್ಥಳೀಯ ಆರ್ಥಿಕತೆಗೆ ಹೆಚ್ಚು ಬಲ ನೀಡುವುದು ಒಳಿತು.
  • ತಲಾವಾರು ಆದಾಯ ಒಂದು ದಿಕ್ಕಿನಿಂದಾಗದು. ಕೌಶಲ-ಪ್ರತಿಭೆ-ಉದ್ಯಮಶೀಲತೆ ಬೆಸೆದುಕೊಂಡಾಗಲೇ ಉದ್ಯೋಗ ಸೃಜನೆ, ಆರ್ಥಿಕ ಸಬಲತೆ ಸಾಧಿಸಲು ಶಕ್ತ
  • ರಾಜ್ಯ ಸರ್ಕಾರದ ಸಹಕಾರದಲ್ಲಿ ಟಿಐಇ ಜಾಗತಿಕಮಟ್ಟದ ಸಮಾವೇಶವನ್ನು ಡಿಸೆಂಬರ್ 9 ರಿಂದ 12ರವರೆಗೆ ಆಯೋಜಿಸಿದ್ದು, ಉದ್ಯಮಶೀಲತೆಗೆ ಒತ್ತು ನೀಡುವುದೇ ಗುರಿಯಾಗಿದೆ.
ಸ್ಥಳೀಯತೆಯಿಂದ ಜಾಗತಿಕದೆಡೆಗೆ ನೋಟವು ಕ್ರಮೇಣ ಬೆಳವಣಿಗೆ, ಸ್ಥಿರವಾದ ವೃದ್ಧಿ, ಸುಸ್ಥಿರ ಅಭಿವೃದ್ಧಿಗೆ ಆಧಾರಸ್ತಂಭವಾಗಿದೆ. ಸ್ವಾವಲಂಬಿ ಬದುಕಿನ ಜತೆಗೆ ಬೇರೆಯವರಿಗೆ ಬದುಕು ಕಟ್ಟಿಕೊಡುವಷ್ಟು ಕೌಶಲ, ಅಕೌಶಲ ಯುವಸಮೂಹ, ಪ್ರತಿಭಾವಂತರು ಸಮರ್ಥರಾಗಬೇಕು.

| ಮದನ್ ಪದಕಿ ಬಹುಕೌಶಲ್ಯ ನಿಪುಣ

ಬಗೆಹರಿಯಲಿ ನೀರಾ‘ವರಿ’

  • ಕಾವೇರಿ, ಕೃಷ್ಣಾ, ಗೋದಾವರಿ ಸೇರಿ ರಾಜ್ಯದ ಪಾಲಿನ ಬಹುತೇಕ ಟ್ರಿಬ್ಯೂನಲ್​ಗಳು ಅಂತಿಮ ತೀರ್ಪು ಕೊಟ್ಟಾಗಿದೆ. ಲಭ್ಯತೆ ಖಾತರಿ, ಶೇಖರಣೆ, ಸಮರ್ಪಕ ಬಳಕೆಗೆ ಗಮನಹರಿಸಬೇಕು.
  • ಮಹಾನದಿ, ಗೋದಾವರಿ ಹೆಚ್ಚುವರಿ ನೀರನ್ನು, ಕೊರತೆ ಅನುಭವಿಸುವ ಕೃಷ್ಣಾ, ಕಾವೇರಿ, ಪೆನ್ನಾರ್​ಗೆ ಹೊರಳಿಸುವ ಪೆನಿನ್ಸುಲಾರ್ ನದಿಗಳ ಅಭಿವೃದ್ಧಿ ಯೋಜನೆಗೆ ಒತ್ತು.
  • ಬರಬಾಧಿತ ಪ್ರದೇಶಕ್ಕೆ ಮೊದಲ ಆದ್ಯತೆ ನಗಣ್ಯವಾಗಿ ನೀರಿರುವ ತಮಿಳುನಾಡು, ಆಂಧ್ರಕ್ಕೆ ಹೆಚ್ಚಿನ ಆದ್ಯತೆ ಪರಿಣಾಮ ನದಿಗಳ ಜೋಡಣೆ ಕನ್ನಡಿಯೊಳಗಿನ ಗಂಟು.
  • ಪಿಆರ್​ಡಿ ಸ್ಕೀಮ್ ನೀರು ಹಂಚಿಕೆಗೆ ಕರ್ನಾಟಕ ಆಕ್ಷೇಪಿಸಿದೆ. ಇದನ್ನೇ ನೆಪವಿಟ್ಟುಕೊಂಡು ತಟಸ್ಥ ನಿಲುವು ತಳೆದ ಕೇಂದ್ರಕ್ಕೆ ಮನವರಿಕೆ, ಒತ್ತಡ ಕಾರ್ಯತಂತ್ರ ಪ್ರಯೋಗಿಸಬೇಕು.
  • ಕಾವೇರಿ ನ್ಯಾಯಾಧಿಕರಣ ತೀರ್ಪಿನಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ. ಈ ಪೈಕಿ ನೀರು ಕಡಿಮೆ ಇದ್ದಾಗ ಹಂಚಿಕೆ ಸೂತ್ರವಿದೆ. ಹೆಚ್ಚಿದ್ದಾಗಲೂ ಹಂಚಿಕೆ ಸೂತ್ರದ ತುರ್ತು ಅಗತ್ಯ.
  • ತಮಿಳುನಾಡು ಕೈಗೆತ್ತಿಕೊಂಡಿರುವ ವೈಗೈ-ಗುಂಡಾರ್ ಸಂಪರ್ಕ ಕಾಲುವೆ ನಿರ್ವಣಕ್ಕೆ ಕರ್ನಾಟಕ ಬಲವಾಗಿ ವಿರೋಧಿಸಿದರೆ ಮೇಕೆದಾಟು ಯೋಜನೆ ಜಾರಿಗೆ ರಹದಾರಿ ಸಿಗಲಿದೆ.
ಕಾನೂನಾತ್ಮಕವಾಗಿ ಹಕ್ಕು ಸ್ಥಾಪನೆ, ಜಲ ಸಂರಕ್ಷಣೆ, ಅಂತರ್ಜಲವೃದ್ಧಿ, ಹರಿ ನೀರಾವರಿ ಹನಿ ನೀರಾವರಿಯಾಗಿ ಪರಿವರ್ತನೆ, ಸಮುದ್ರ ನೀರು ಸಂಸ್ಕರಣೆ. ಇವು, ನೀರಾವರಿ ಪ್ರದೇಶ ಸೃಜನೆ ವಿಸ್ತರಣೆಗೆ, ನೀರಿನ ಭದ್ರತೆಗೆ ಪ್ರಮುಖ ಮಾನದಂಡಗಳು.

| ಕ್ಯಾಪ್ಟನ್ ಎಸ್.ರಾಜಾರಾವ್ ನೀರಾವರಿ ತಜ್ಞರು

ಸಾಂಸ್ಕೃತಿಕ ಸ್ವಾಯತ್ತತೆ ನೀಡಲಿ

  • ಸಾಂಸ್ಕೃತಿಕ ಪ್ರಕಾರಕ್ಕೆ ಕೆಲಸ ಮಾಡಲು ಅಕಾಡೆಮಿಗಳಿಗೆ ಅನುದಾನವಿದೆ. ಆರ್ಥಿಕ ನಿಯಂತ್ರಣ ಸರ್ಕಾರದ ಬಳಿಯೇ ಇರಲಿ, ಅಕಾಡೆಮಿಗಳಿಗೆ ಸಾಂಸ್ಕೃತಿಕ ಸ್ವಾಯತ್ತತೆ ನೀಡಲಿ.
  • ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ಅಕಾಡೆಮಿಗಳ ಕಾರ್ಯವ್ಯಾಪ್ತಿ ನಾಲ್ಕು ಕಾಲ ನಿಲ್ಲುವಂತಹ ಯೋಜನೆ ಜಾರಿ, ಜನರಿಗೆ ಉತ್ತರದಾಯಿಯಾಗುವ ಅವಕಾಶ ಕಲ್ಪಿಸಬೇಕು.
  • ವಿವಿಗಳ ಕುಲಪತಿ ಹುದ್ದೆಗೆ ಶೋಧನಾ ಸಮಿತಿ ಮಾದರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷ ನೇಮಕಕ್ಕೂ ರಚನೆ, ಹೊಸಬರ ನೇಮಕ ತನಕ ಹಾಲಿ ಅಧ್ಯಕ್ಷರ ಅವಧಿ ವಿಸ್ತರಣೆ.
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಕೇಂದ್ರೀಕರಣ ನಾಲ್ಕು ಕಂದಾಯ ವಿಭಾಗಕ್ಕೊಂದು ಪ್ರಾದೇಶಿಕ ಕಚೇರಿ ಸ್ಥಾಪನೆ. ವರ್ಗಾವಣೆ, ಬಡ್ತಿ ಬಿಟ್ಟು ಉಳಿದೆಲ್ಲ ಅಧಿಕಾರ ನೀಡುವುದು ಸೂಕ್ತ.
  • ಕೇಂದ್ರೀಯ ವಿವಿ ಮಾದರಿಯಲ್ಲಿ ಪ್ರತ್ಯೇಕ ಬುಡಕಟ್ಟು ವಿವಿ ಸ್ಥಾಪಿಸಿ, ಬುಡಕಟ್ಟು ಜೀವನ, ಪರಂಪರೆ, ಸಂಸ್ಕೃತಿ ಅಧ್ಯಯನ ಮತ್ತು ಸಂಶೋಧನೆಗೆ ಅನುಕೂಲತೆ.
  • ಸೂಫಿ, ಸಂತರು ಮತ್ತು ತತ್ವಪದಕಾರರಿಗೆ ಕರ್ನಾಟಕಕ್ಕೆ ಗಟ್ಟಿ ನೆಲೆಯಿದೆ. ಇದಕ್ಕಾಗಿ ಸಂಶೋಧನೆ ಮತ್ತು ಪ್ರಸಾರ ಕೇಂದ್ರ ಅಸ್ತಿತ್ವಕ್ಕೆ ತರುವ ಪ್ರಸ್ತಾವನೆಗೆ ಮರುಜೀವ ನೀಡುವುದು.
ಹಿಂದಿನ ಕಾಂಗ್ರೆಸ್ ಸರ್ಕಾರ ಹೊಸ ಸಂಸ್ಕೃತಿ ನೀತಿಗೆ ಆಸಕ್ತಿವಹಿಸಿ ನನ್ನ ನೇತೃತ್ವದ ಸಮಿತಿಯಿಂದ ವರದಿ, ಶಿಫಾರಸು ತರಿಸಿಕೊಂಡಿತು. ಅಂದಿನ ಸಚಿವ ಎಚ್.ಕೆ.ಪಾಟೀಲ ನೇತೃತ್ವದ ಸಂಪುಟದ ಉಪ ಸಮಿತಿ ಬಹುತೇಕ ಶಿಫಾರಸುಗಳನ್ನು ಒಪ್ಪಿತು. ಆರ್ಥಿಕ ಇಲಾಖೆ ಸಮ್ಮತಿ, ಅನುಷ್ಠಾನ ಸಾಧ್ಯವಾಗಿಲ್ಲ.

| ಪ್ರೊ. ಬರಗೂರು ರಾಮಚಂದ್ರಪ್ಪ ಹಿರಿಯ ಸಾಹಿತಿ

ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆಯಾಗಲಿ

  • ಡಾ.ಕೆ.ಕಸ್ತೂರಿರಂಗನ್ ವರದಿ ಶಿಫಾರಸಿನ ಪ್ರಕಾರ ಇಲಾಖೆಯಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ಸುಧಾರಣೆ, ಬಲವರ್ಧನೆ ಕ್ರಮಗಳ ಅನುಷ್ಠಾನ.
  • ಕರೊನಾ ಸಾಂಕ್ರಾಮಿಕ ರೋಗದ ಹಾವಳಿ ಕಂಡುಕೊಂಡ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮೇಲ್ದರ್ಜೆಗೇರಿಸುವ ಅಗತ್ಯತೆ, ಸವಲತ್ತುಗಳ ಸುಧಾರಣೆಯೆಡೆ ಒತ್ತು.
  • ಸಾರ್ವಜನಿಕ ಆರೋಗ್ಯ ಸೇವೆಗಳ ನೀತಿ-ನಿರ್ಧಾರಗಳು ಪರಿಣಾಮಕಾರಿ, ಬಜೆಟ್​ನಲ್ಲಿ ಒದಗಿಸುವ ಅನುದಾನದ ಪ್ರಮಾಣವನ್ನೂ ಹೆಚ್ಚಿಸುವುದು ಮುಖ್ಯ.
  • ಆರೋಗ್ಯ ಇಲಾಖೆಯಲ್ಲಿ 2004ರಲ್ಲಿದ್ದ 1.20 ಲಕ್ಷ ಸಿಬ್ಬಂದಿ 2024ರ ವೇಳೆಗೆ 70 ಸಾವಿರಕ್ಕೆ ಕುಸಿದಿದೆ. ಖಾಲಿಯಿರುವ ಎಲ್ಲ ಹುದ್ದೆಗಳ ಭರ್ತಿಗೂ ಮುತುವರ್ಜಿ.
  • ಇಲಾಖೆಯಲ್ಲಿ 1985ರ ಜನಸಂಖ್ಯೆಗೆ ತಕ್ಕಂತೆ ಹುದ್ದೆಗಳು ಸೃಜನೆಯಾಗಿವೆ. ಚಾಲ್ತಿ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಮಂಜೂರು, ನೇಮಕ ಪ್ರಕ್ರಿಯೆಗೆ ಆದ್ಯತೆ.
  • ಆಹಾರ ಸುರಕ್ಷತಾ ವಿಭಾಗದ ಪ್ರತ್ಯೇಕ ವೃಂದ ಮತ್ತು ನೇಮಕ ನಿಯಮಾವಳಿ ಅಂತಿಮ, ಸಾರಿಗೆ ವಿಭಾಗ ಪ್ರತ್ಯೇಕ ಸೃಜನೆ, ಕಂದಾಯ ವಿಭಾಗಕ್ಕೊಂದು ಡ್ರಗ್ಸ್ ಲಾಜಿಸ್ಟಿಕ್ ಪ್ರಯೋಗಾಲಯ.
  • ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 70 ವರ್ಷಗಳ ಬದಲು 60 ವರ್ಷಗಳವರೆಗೆ ವಯೋಮಿತಿ ನಿಗದಿ, ಅಂಗಾಂಗ ಕಸಿ ಚಿಕಿತ್ಸೆ ಸೇರ್ಪಡೆ.
  • ಈ ಯೋಜನೆ ಅಸುರೆನ್ಸ್ ಬದಲು ಇನ್ಶುರೆನ್ಸ್ ಆಗಿ ಪರಿವರ್ತನೆ ಮೊತ್ತದ ಮಿತಿಯು ಐದು ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಳ, ಸಾರ್ವಜನಿಕರಿಂದ 10 ರಿಂದ 20 ರೂ. ಶುಲ್ಕ ಸಂಗ್ರಹ.
  • ಚಿಕ್ಕ ಮಕ್ಕಳಿಗೂ ಆರೋಗ್ಯ ತಪಾಸಣೆಯಿಂದ ಬೊಜ್ಜು, ಕ್ಯಾನ್ಸರ್ ಮತ್ತಿತರ ಕಾಯಿಲೆಗಳ ಪತ್ತೆಹಚ್ಚಿ ಮುಂಚಿತವಾಗಿ ಹೆಚ್ಚಿನ ವೆಚ್ಚವಿಲ್ಲದೆ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯ.
  • ಕ್ಷಯರೋಗ ನಿಮೂಲನೆ, ಹೆಚ್ಚುತ್ತಿರುವ ಅಸಾಂಕ್ರಾಮಿಕ ರೋಗಗಳು, ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ ನಿಯಂತ್ರಣ, ವಿವಿಧ ರೂಪದ ಮಾಲಿನ್ಯಗಳಿಗೆ ಕಡಿವಾಣ ಅಗತ್ಯ.
ಆರ್ಥಿಕತೆ ಲಕ್ಷ್ಯದಲ್ಲಿ ಆರೋಗ್ಯದ ಅಲಕ್ಷ್ಯ ಹೊಸ ಕಾಯಿಲೆಗಳ ಹುಟ್ಟು, ಕ್ಯಾನ್ಸರ್, ಬಿಪಿ, ಮಧುಮೇಹ ಸಾಮಾನ್ಯ ಎಂಬಂತಾಗಿದೆ. ಜೀವನ-ಆಹಾರ ಶೈಲಿಯಲ್ಲಿ ಬದಲಾವಣೆಯಿಂದ ಒತ್ತಡಮುಕ್ತ, ಸರಳ ಜೀವನ ಸಾಧ್ಯ. ರಾಜ್ಯ, ದೇಶದ ಏಳಿಗೆಗೆ ಆರೋಗ್ಯವೇ ಭದ್ರ ಅಡಿಪಾಯ.

| ಡಾ. ಸಿ. ರಾಮಚಂದ್ರ ನಿವೃತ್ತ ನಿರ್ದೇಶಕ, ಕಿದ್ವಾಯಿ ಸಂಸ್ಥೆ

ಕೈಗಾರಿಕೆ ಸ್ನೇಹಿ ವಾತಾವರಣ ಸೃಷ್ಟಿಸಿ

  • ಚೀನಾದಿಂದ ಕಾಲ್ತೆಗೆಯುತ್ತಿರುವ ಉದ್ಯಮ, ಕಂಪನಿಗಳನ್ನು ಸೆಳೆಯಲು ಕರ್ನಾಟಕಕ್ಕೆ ಹೆಚ್ಚಿನ ಅವಕಾಶಗಳಿರುವ ಕಾರಣ ಪೂರಕ ಕಾರ್ಯಪರಿಸರ ವ್ಯವಸ್ಥೆ ಸೃಷ್ಟಿಸಬೇಕು.
  • ಈಗಿನ ಏಕಗವಾಕ್ಷಿ ವ್ಯವಸ್ಥೆಗೆ ಅನೇಕ ಬಾಗಿಲುಗಳಿವೆ. ಅಕ್ಷರಶಃ ಏಕಗವಾಕ್ಷಿ ರೀತಿಯಲ್ಲಿ ವ್ಯವಸ್ಥೆ ಅಣಿಗೊಳಿಸಿ, ಯೋಜನಾ ಪ್ರಸ್ತಾವನೆಗಳಿಗೆ 24 ತಾಸಿನಲ್ಲಿ ಅನುಮೋದಿಸಬೇಕು.
  • ಸುಗಮ ವ್ಯವಹಾರ ಜಾಗತಿಕ ಮಖ್ಯಾಂಶ. ತಮಿಳುನಾಡು ಮಾದರಿಯಲ್ಲಿ ಕ್ಷಿಪ್ರ ಕಾರ್ಯವಿಧಾನ, ಶುಲ್ಕಗಳ ಕಡಿತ, ಜಮೀನು ಸೇರಿ ಅಗತ್ಯ ಸವಲತ್ತು ಒದಗಿಸುವುದು.
  • ಮಹಾರಾಷ್ಟ್ರ ಮಾದರಿಯಲ್ಲಿ ಕೃಷಿ ರಂಗವನ್ನು ಉದ್ಯಮವಾಗಿ ಪರಿವರ್ತಿಸಿ, ತಂತ್ರಜ್ಞಾನದ ಎಲ್ಲ ಆವಿಷ್ಕಾರಗಳನ್ನು ಅಳವಡಿಸಿದರೆ ಹೆಚ್ಚೆಚ್ಚು ಉದ್ಯೋಗಗಳ ಸೃಷ್ಟಿ ಸಾಧ್ಯ.
  • ಉದ್ಯೋಗಾವಕಾಶಗಳು, ಆರ್ಥಿಕತೆ ಬೆಳವಣಿಗೆ ದೃಷ್ಟಿಯಿಂದ ಸಣ್ಣ, ಅತಿಸಣ್ಣ ಕೈಗಾರಿಕೆಗಳದು ಗಣನೀಯ ಕೊಡುಗೆಯಿದೆ. ಈ ಕೈಗಾರಿಕೆಗಳಿಗೆ ಪ್ರತ್ಯೇಕ ನೀತಿ ಅನುಷ್ಠಾನ.
  • ಉದ್ಯಮ-ವಹಿವಾಟುಸ್ನೇಹಿ ನೀತಿಗಳು ರಾಜ್ಯದಲ್ಲಿವೆ. ಹಾಗೆಯೇ ಈ ನೀತಿಗಳು ನಮ್ಯವಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಕಾಲಮಿತಿಯೊಳಗೆ ಒದಗಿಸಬೇಕು.
Capture
ಉದ್ಯಮ- ವಹಿವಾಟು ವಲಯ, ಸರ್ಕಾರ ಮತ್ತು ಸಮುದಾಯ ಒಂದಕ್ಕೊಂದು ಬೆಸೆದುಕೊಂಡು ಕೆಲಸ ಮಾಡಿದರೆ ಕರ್ನಾಟಕ ನಿರೀಕ್ಷಿತ ಗುರಿಯತ್ತ ಸಾಗುತ್ತದೆ. ಉತ್ತರೋತ್ತರವಾಗಿ ಸಮಗ್ರ, ಸುಸ್ಥಿರ ಮತ್ತು ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಸಾಧಿಸಲು ಸಹಾಯಕವಾಗುತ್ತದೆ.

| ಎಂ.ಜಿ.ಬಾಲಕೃಷ್ಣ ಅಧ್ಯಕ್ಷ. ಎಫ್​ಕೆಸಿಸಿಐ

ಕೃಷಿ ಬಿಕ್ಕಟ್ಟುಗಳು ಬಗೆಹರಿಯಲಿ

  • ರಾಜ್ಯದಲ್ಲಿ ಕೃಷ್ಣಾ, ಕಾವೇರಿ, ಪಾಲಾರ್, ಪೆನ್ನಾರ್ ಸೇರಿ ಏಳು ಕಣಿವೆಗಳಿವೆ. ಆದರೂ ನೀರಾವರಿ ಸೃಜನೆಯಲ್ಲಿ ರಾಷ್ಟ್ರೀಯ ಸರಾಸರಿ ಶೇ.50, ರಾಜ್ಯದಲ್ಲಿ ಶೇ.30 ರಿಂದ 35ರಷ್ಟಿದೆ. ರಾಜಸ್ಥಾನದ ನಂತರ ಅತಿಹೆಚ್ಚು ಒಣಭೂಮಿ ಇರುವುದು ಏಕೆ ?
  • ಕೃಷಿ ಮತ್ತು ಸಂಬಂಧಿತ ವಲಯಗಳ ಸುಧಾರಣೆಗೆ ಹಲವು ಆಯೋಗಗಳ ಅಧ್ಯಯನ ವರದಿಗಳು, ಶಿಫಾರಸುಗಳು, ಕಾಯ್ದೆಗಳ ಪರ್ವವೇ ನಮ್ಮಲ್ಲಿದೆ. ಆದರೂ ಕೃಷಿ ಬಿಕ್ಕಟ್ಟು ಬಗೆಹರಿದಿಲ್ಲ.
  • ಅತಿಹೆಚ್ಚು ರಾಷ್ಟ್ರೀಕೃತ ಬ್ಯಾಂಕ್​ಗಳನ್ನು ಕರ್ನಾಟಕ ಕೊಟ್ಟಿದೆ ಆದರೂ ಕರ್ನಾಟದ ರೈತರು ಹೆಚ್ಚು ಋಣದಲ್ಲಿ ಬಿದ್ದಿರುವುದೇಕೆ?
  • ಕೃಷಿ, ತೋಟಗಾರಿಕೆ, ಪಶು ಸೇರಿ ಆರು ವಿವಿಗಳಿವೆ. ರಾಜ್ಯ ಸರ್ಕಾರ ಮತ್ತೊಂದು ವಿವಿ ಸ್ಥಾಪಿಸಲು ಹೊರಟಿದೆ. ಕೃಷಿವಿಜ್ಞಾನ, ಸಂಶೋಧನೆ, ರೈತರ ತರಬೇತಿ ಕೇಂದ್ರ ಎಲ್ಲ ಸೇರಿದರೆ ದೇಶದಲ್ಲೇ ಅತ್ಯಧಿಕ. ಆದರೂ ಉತ್ಪಾದಕತೆ ಕಡಿಮೆ, ಇಳುವರಿ ಕುಸಿತ, ವೆಚ್ಚ ಜಾಸ್ತಿ ಹೀಗೇಕೆ ?
  • ಪಂಜಾಬ್ ರೈತ ಸಂಘಟನೆ ಚಳವಳಿ ಹೂಡಿ ಕೇಂದ್ರದ 3 ಕಾಯ್ದೆಗಳನ್ನು ಹಿಂತೆಗೆಸಿದವು. ಆದರೆ ನಮ್ಮಲ್ಲಿ ಪ್ರಬಲ ರೈತ ಸಂಘಟನೆಗಳು, ಚಳವಳಿಗಳಿದ್ದವು. ಯಾವುದೂ ಸರಿಯಾಗಲಿಲ್ಲವೇಕೆ ?
  • ಮೇಲೆ ಎತ್ತಿದ ಐದು ಪ್ರಶ್ನೆಗಳಿಗೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಸಮಿತಿ ಸಲ್ಲಿಸಿದ ವರದಿ, ಶಿಫಾರಸುಗಳಲ್ಲಿ ಉತ್ತರ, ಸಮಾಧಾನ ಮತ್ತು ಶಾಶ್ವತ ಪರಿಹಾರಗಳಿವೆ.
  • ಜೆಡಿಎಸ್-ಬಿಜೆಪಿ ಸರ್ಕಾರ ಈ ಸಮಿತಿ ರಚಿಸಿತ್ತು, ಕಾಂಗ್ರೆಸ್ ಸರ್ಕಾರ ವರದಿ ಸ್ವೀಕರಿಸಿತ್ತು. ರೈತರಿಗೆ ಬಹು ಮೂಲದ ಆದಾಯಕ್ಕೆ ಅನುವು ಮಾಡಿಕೊಡುವುದೂ ಸೇರಿ 20 ಶಿಫಾರುಸಗಳಿವೆ.
  • ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಸಣ್ಣ ನೀರಾವರಿ, ಜಲಸಂಪನ್ಮೂಲ ಸಹಿತ ಕೃಷಿ ಸಂಬಂಧಿತ ವಲಯಗಳ ಇಲಾಖೆಗಳ ವಿಲೀನ. ಸಿಎಂ ಅಧ್ಯಕ್ಷತೆಯಲ್ಲಿ ಕೃಷಿ ಮಿಷನ್ ಸ್ಥಾಪನೆ ಶಿಫಾರಸುಗಳಲ್ಲಿ ಪ್ರಮುಖ.
ಕರ್ನಾಟಕ ಪ್ರಗತಿಪರ ರಾಜ್ಯ. ನಿರೀಕ್ಷಿತ ಪ್ರಗತಿ ಸಾಧಿಸಲು ಪೂರಕವಾದ ಅಂಶಗಳಿವೆ. ಶಾಸನ, ಕಾರ್ಯಾಂಗ, ರೈತರೊಂದಿಗೆ ಸಮನ್ವಯ, ನೀತಿ-ನಿರ್ಧಾರಗಳಲ್ಲಿ ದೃಢತೆ ಮತ್ತು ಕ್ಷಮತೆಯು ಕೃಷಿ ಮತ್ತು ಸಂಬಂಧಿತ ವಲಯ ಗಳಲ್ಲಿ ಸುಧಾರಣೆ ಪರ್ವಕ್ಕೆ ಅನುವು ಮಾಡಿಕೊಡಲಿದೆ.

| ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಕೃಷಿ ಆರ್ಥಿಕ ತಜ್ಞ

ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು

  • ತಂತ್ರಜ್ಞಾನ ಬಹಳ ಮುಖ್ಯ, ರಕ್ಷಣಾ ವಲಯದಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ, ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್ ಈಗ ಹೆಚ್ಚಿನ ಬಳಕೆಯಾಗುತ್ತಿವೆ. ಅದಕ್ಕೆ ತಕ್ಕಂತೆ ಸಜ್ಜಾಗಬೇಕಾಗಿದೆ
  • ಎಐ ತಂತ್ರಜ್ಞಾನ ಉಪಯೋಗ ಹಾಗೂ ದುರುಪಯೋಗದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕ ಯೋಜನೆಯೊಂದನ್ನು ರೂಪಿಸಬೇಕಾಗಿದೆ.
  • ಐಐಎಂ, ಐಐಎಸ್​ಸಿಗಳಂತಹ ಅನೇಕ ಉನ್ನತ ಸಂಸ್ಥೆಗಳಲ್ಲಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಬೆಳವಣಿಗೆಗೆ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಬೇಕು.
  • ಸಿ-ಕ್ಯಾಪ್, ಬಯೋದಲ್ಲಿ ಅನೇಕ ಸ್ಟಾರ್ಟ್ ಅಪ್​ಗಳಿವೆ. ಅವುಗಳಿಗೆ ಆರ್ಥಿಕ ಪ್ರೋತ್ಸಾಹ ಹೆಚ್ಚಾಗಬೇಕು.
  • ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಮಾರುಕಟ್ಟೆ ಲಭ್ಯವಾಗಬೇಕು. ಬೆಂಗಳೂರಿಗೆ ಇರುವ ಹೆಸರನ್ನು ಕಾಪಾಡಿಕೊಳ್ಳಬೇಕು.
  • ಈಸ್ ಆಫ್ ಬ್ಯುಸಿನೆೆಸ್​ನಲ್ಲಿ ಬದಲಾವಣೆಗೆ ನೀತಿ ಬರಬೇಕು. ಕಂಪೆನಿಗಳ ಸ್ಥಾಪನೆಗೆ ಏಕಗವಾಕ್ಷಿ ಯೋಜನೆ ಜಾರಿಗೆ ತರಬೇಕು. ಜಾಗ ಕೊಟ್ಟಕೂಡಲೇ ಉತ್ಪಾದನೆ ಆರಂಭವಾಗುವ ರೀತಿಯಲ್ಲಿರಬೇಕು.
  • ಸಾಫ್ಟ್​ವೇರ್ ಆಗಿದೆ, ಅದು ಮುಂದುವರಿಯುತ್ತದೆ. ಈಗ ಸೆಮಿಕಂಡಕ್ಟರ್ ಕಡೆ ಗಮನಹರಿಸಬೇಕು.
  • ಡಾಟಾ ಸೆಂಟರ್​ಗೆ ಅಗತ್ಯವಾದ ಸೌಲಭ್ಯ ನೀಡಿ, ಅದರ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕು.
  • ಸೈಬರ್ ಸೆಕ್ಯೂರಿಟಿಗೆ ಆದ್ಯತೆ ನೀಡಿ, ಎಲ್ಲಿಯೂ ಖಾಸಗಿ ಡಾಟಾ ಕಳವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
  • ಡಿಜಿಟಲ್ ಎಕಾನಮಿ ಈಗ ಬೆಳೆದಿದೆ, ಅದನ್ನು ಇನ್ನಷ್ಟು ಬೆಳೆಸಲು ಸರ್ಕಾರ ಪ್ರಯತ್ನ ಮಾಡಬೇಕು.
ಮಾಹಿತಿ ತಂತ್ರಜ್ಞಾನದ ಬಳಕೆಗೆ ಶಿಕ್ಷಣ, ಆರೋಗ್ಯ, ಉತ್ಪಾದನೆಗೆ ಈಗ ಹೊಸ ಕ್ಷೇತ್ರಗಳಾಗಿವೆ. ಅವುಗಳ ಕಡೆ ಗಮನ ಹರಿಸಬೇಕು. ಈ ವಲಯ ಉದ್ಯೋಗ ಸೃಷ್ಟಿಯಾಗುವ ವಲಯವೂ ಆಗಿದೆ.

| ನಾಗಾನಂದ ದೊರಸ್ವಾಮಿ ಮ್ಯಾನೇಜಿಂಗ್ ಪಾರ್ಟ್​ನರ್, ಐಡಿಯಾ ಸ್ಪ್ರಿಂಗ್ ಕ್ಯಾಪಿಟಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net