ಬಿಳಿಗಿರಿರಂಗನ ಬೆಟ್ಟದ ದೊಡ್ಡ ಜಾತ್ರೆಗೆ ಹೊರಟ ಭಕ್ತರಿಗೆ ಬಸ್​ ಸಿಗದೆ ಪರದಾಟ, ಮೈಲಿಗಟ್ಟಲೇ ಟ್ರಾಫಿಕ್​ಜಾಮ್

New Project
Published on

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ಬಿಳಿಗಿರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ದೊಡ್ಡಜಾತ್ರೆ ನಡೆಯುತ್ತಿದ್ದು, ಈ ಹಿನ್ನೆಲೆ ಶನಿವಾರ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ಸುಮಾರು 10 ಕಿ.ಮೀ. ದೂರದವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಗಿದೆ. ಯಳಂದೂರಿನ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ನೂರಾರು ಜನ ಜಮಾವಣೆಗೊಂಡಿದ್ದಾರೆ. ಮುಂಜಾನೆಯೇ ಉಪವಾಸವಿದ್ದು ದೇವರ ದರ್ಶನ ಪಡೆಯಲು ಬಂದ ಭಕ್ತರು ಸುಸ್ತಾಗಿ ರಸ್ತೆಬದಿ ಕುಳಿತ್ತಿದ್ದಾರೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ದೊಡ್ಡ ಜಾತ್ರೆ ಪ್ರಯುಕ್ತ ನಡೆಯುತ್ತಿದ್ದ ರಥೋತ್ಸವವು ದೇವಸ್ಥಾನ ಜೀಣೋರ್ದ್ಧಾರ ಕಾಮಗಾರಿ ಹಾಗೂ ಕರೊನಾ ಹಿನ್ನೆಲೆ 5 ವರ್ಷದಿಂದ ನಡೆದಿರಲಿಲ್ಲ. ಈ ಬಾರಿಯ ರಥೋತ್ಸವ ನಡೆಯುತ್ತಿದೆ. ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆ ಮತ್ತು ಚಾಮರಾಜನಗರದ ವಿವಿಧ ಗ್ರಾಮಗಳಿಂದ ಯಳಂದೂರಿಗೆ ಆಗಮಿಸಿರುವ ಬಸ್ ಸಿಗದೆ ನೂರಾರು ಭಕ್ತರು ಬೆಳಗ್ಗೆಯಿಂದ ಪರದಾಡುತ್ತಿದ್ದಾರೆ.

ಯಳಂದೂರು ಪಟ್ಟಣದಿಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ದಿನ ಈ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದರಿಂದ ಸಂಚಾರಕ್ಕೆ ತೊಡಕಾಗುತ್ತದೆ ಎಂದು ಅರಣ್ಯ ಇಲಾಖೆಯ ಚೆಕ್​ಪೋಸ್ಟ್​ ಬಳಿಯಿಂದ ಬೆಟ್ಟಕ್ಕೆ ಕೆಎಸ್​ಆರ್​ಟಿಸಿಯಿಂದ ಉಚಿತ ಬಸ್​ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳಿಗೆ ಮಾರ್ಗದಲ್ಲೇ ತಡೆಯೊಡ್ಡಿ ಸರ್ಕಾರಿ ಬಸ್ ಸೌಲಭ್ಯವನ್ನ ಜಿಲ್ಲಾಡಳಿತ ಕಲ್ಪಿಸಿದೆ. ಆದರೂ ಸಂಚಾರ ದಟ್ಟಣೆ ಉಂಟಾಗಿದ್ದು, ಪರಿಣಾಮ ಖಾಸಗಿ ವಾಹನಗಳ ಪ್ರವೇಶಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net