ಬಾಲ್ಯ ತೊರೆದ ಬಾಲಕಾಂಡ

ramamandhira
Published on

| ಕೃಷ್ಣರಾಜ ಕುತ್ಪಾಡಿ

ರಾಮಾಯಣದ ಪ್ರತಿ ಕಾಂಡದ ಹೆಸರಿಗೂ ಸಾರ್ಥಕತೆ ಇದೆ; ಬಾಲಕಾಂಡ ಒಂದನ್ನು ಬಿಟ್ಟು. ಅಲ್ಲಿ ರಾಮನ ಬಾಲ್ಯದ ಸುಳಿವೇ ಇಲ್ಲ. ಮುಂದೆ ರಾಮನ ಅಯೋಧ್ಯೆಯ ಸಂಬಂಧವನ್ನು ಅಯೋಧ್ಯಾಕಾಂಡ ನಿರೂಪಿಸುತ್ತದೆ. ಕಾಡಿನಲ್ಲಿ ನಡೆದ ಕಥೆ ಅರಣ್ಯಕಾಂಡ. ಕಿಷ್ಕಿಂಧೆಯತ್ತ ಪಯಣ ನಡೆಸಿದ್ದು

krishnaraja kuthpadi
ಕಿಷ್ಕಿಂಧಾಕಾಂಡ. ಸುಂದರ ಎಂದರೆ ಕಪಿ; ಹನುಮಂತನ ಜೈತ್ರಯಾತ್ರೆಯೇ ಸುಂದರಕಾಂಡ. ಯುದ್ಧ ಕೈಗೊಂಡು ರಾವಣನ ಗೆದ್ದದ್ದು ಯುದ್ಧಕಾಂಡ. ಈ ಎಲ್ಲ ಕಾಂಡಗಳಲ್ಲೂ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದಿರುತ್ತವೆ. ಅವುಗಳಿಗೆ ಉತ್ತರಿಸುವ ಮತ್ತು ಪಟ್ಟಾಭಿಷೇಕದ ನಂತರದ ಕಥೆಯನ್ನು ಕಟ್ಟಿಕೊಡುವಂಥದ್ದು ಉತ್ತರಕಾಂಡ. ಒಟ್ಟು 24,000 ಶ್ಲೋಕಗಳಿಂದ ಕೂಡಿದ ಸುಂದರ ಕಾವ್ಯ ಶಾಸ್ತ್ರ.

ಕೃಷ್ಣನ ಬಾಲ್ಯದ ಸುತ್ತ ನೂರಾರು ಘಟನೆಗಳಿವೆ. ರಾಮನ ಬಾಲ್ಯ ಎಲ್ಲೂ ತೋರದು. ಐದಾರರ ಎಳೆಯ ರಾಮ ತನ್ನವರೊಡನೆ ಆಟವಾಡುತ್ತಿದ್ದಾಗ, ಅಡ್ಡಲಾಗಿ ಬಂದ ಮಂಥರೆಯ ಕಾಲೆಳೆದ. ಉರುಳಿಬಿದ್ದಳು. ನಗೆಗೀಡಾದಳು. ಎದೆ ಸುಟ್ಟುಕೊಂಡಳು. ಈ ಸಣ್ಣ ವಿವರ ಕಾಣುವುದು ಅಗ್ನಿ ಪುರಾಣದ ರಾಮಾಯಣದಲ್ಲಿ. ಇದು ಬಿಟ್ಟರೆ ದಾಸರಿಗೆ ಬಾಲರಾಮ ಕಾಡಿದ್ದುಂಟು. ‘ಅಂಗಳದೊಳು ರಾಮನಾಡಿದ, ಚಂದ್ರ ಬೇಕೆಂದು ತಾ ಹಠ ಮಾಡಿದ’ ಎಂದು ಆಗಸದ ಚಂದಿರನನ್ನು ಕನ್ನಡಿಯಲ್ಲಿ ತಂದು ತೋರುವವರೆಗೂ ರಾಮ ಉಂಡಿರಲಿಲ್ಲ. ಮೊಬೈಲ್ ನೋಡಿಸಿಯೆ ಮಕ್ಕಳ ಹೊಟ್ಟೆ ತುಂಬಿಸುವ ಅಥವಾ ಸುಮ್ಮನಿರಿಸುವ ಗೀಳಿಗೆ ಈ ಉಣಿಸಿನ ಪಾಠ ಅತ್ಯಂತ ಪ್ರಸ್ತುತ. ಇದಾವುದರ ಸುಳಿವೂ ವಾಲ್ಮೀಕಿ ರಾಮಾಯಣದಲ್ಲಿಲ್ಲ. ಹಾಗಿದ್ದರೆ ಬಾಲಕಾಂಡ ಎಂಬ ಹೆಸರಿನ ಔಚಿತ್ಯವೇನು?

ಈ ಹೆಸರನ್ನು ಇನ್ನೊಂದು ದಿಕ್ಕಿನಿಂದ ನೋಡಬೇಕಿದೆ. ನಡೆದ ಘಟನೆಗಳ ಮೆಲುಕು ಹಾಕಬೇಕಿದೆ. ಗುರುಗಳೊಡನೆ ಕಾಡಿನಲ್ಲಿ ವಾಸ ಮಾಡಿ ದಕ್ಕಿದ್ದು ಗುರುಬಲ. ಗೆಡ್ಡೆಗಣಸು, ಹಣ್ಣು-ಹಂಪಲುಗಳನ್ನು ತಿಂದು ಪಡೆದದ್ದು ಸಾತ್ವಿಕ ಆಹಾರದ ಬಲ. ಗುರುಗಳಿಂದ ಪಡೆದದ್ದು ಅಸ್ತ್ರಬಲ. ಇತಿಹಾಸವನ್ನು ಅರಿವ ಶಿಕ್ಷಣದ ಕ್ರಮದಿಂದ ಹೆಚ್ಚಿದ ಆತ್ಮಬಲ. 10,000 ಆನೆಗಳ ಬಲದ ತಾಟಕೆಯನ್ನು ಸಂಹರಿಸಿ, ದೇವತಾ ವರಬಲದಿಂದ ಮತ್ತರಾದ ರಕ್ಕಸರೊಡನೆ ಹೋರಾಡಿ, ಯಜ್ಞದ ರಕ್ಷಣೆ ನಡೆಸಿ ಋಷಿಗಳಿಂದ ಪಡೆದ ಹಾರೈಕೆಯ ಬಲ. ಶಿಲೆಯಿಂದ ಅಹಲ್ಯೆಯನ್ನು ಪಾರುಗೊಳಿಸಿ, ಗೌತಮರೊಂದಿಗೆ ಒಡಗೂಡಿಸಿ ತೋರಿದ ದೈವಬಲ. ಎಂಟೆದೆಯ ರಾವಣ ಮೊದಲಾದ ಸಾವಿರಾರು ಮಹಾವೀರರು ಎತ್ತಲಾರದ ಶಿವಧನುಸ್ಸನ್ನು ಲೀಲೆಯಿಂದ ಹೆದೆ ಏರಿಸಿದಾಗ ಮುರಿಸಿದ ತೋಳ್ಬಲ. ಸೀತೆಯನ್ನು ಗುಣದಿಂದ ಸೆಳೆದು ಮಾಲೆ ಹಾಕಿಸಿಕೊಂಡ ಚೆಲುವಿನ ಬಲ. ಕ್ಷತ್ರಕುಲದ ಹುಟ್ಟಡಗಿಸಿದ ಪರಶುರಾಮನನ್ನು ಸೋಲಿಸುವ ನೆಪದಲ್ಲಿ ಅವನಲ್ಲಿ ಸೇರಿಕೊಂಡಿದ್ದ ಅತುಲನೆಂಬ ರಕ್ಕಸನನ್ನು ಕೊಂದ ಬುದ್ಧಿಬಲ. ಕ್ಷತ್ರಿಯನಾಗಿ ದುರುಳನ ಸೀಳಿದ ಕರ್ತವ್ಯದ ನಿರ್ವಹಣೆಯ ಬಲ. ಹೀಗೆ ಗುರುಬಲ, ವಿದ್ಯಾಬಲ, ಆತ್ಮಬಲ, ವರಬಲ, ದೈವಬಲ, ಅನುಗ್ರಹದ ಬಲ, ಸೌಂದರ್ಯ ಬಲ, ಬುದ್ಧಿಬಲ ಹೀಗೆ ನೂರಾರು ಬಲಗಳ ಸಮಾವೇಶ ರಾಮನಲ್ಲಿ. ಇಂತಹ ಸ್ವತಃ ಬಲವಂತನಾದ ರಾಮನ ಪರಿಚಯ ಮಾಡಿಸುವ ಬಲ ಸಂಬಂಧಿ ಕಾಂಡ ಬಾಲಕಾಂಡ ಎಂದರೆ ಹೆಚ್ಚು ಅರ್ಥಪೂರ್ಣ.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net