ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ಮೇಲೆ ವಾಹನದ ಚಕ್ರ ಹರಿದು ಸಾವು

accident-15
Published on

ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರದ ವಾಹನದ ಹ್ಯಾಂಡಲ್ ತಾಗಿ ಆಯತಪ್ಪಿ ರಸ್ತೆಗೆ ಬಿದ್ದ ಬಾಲಕನ ತಲೆ ಮೇಲೆ ಗೂಡ್ಸ್ ವಾಹನದ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಿಎಚ್‌ಇಎಲ್‌ನ ಬಾಪೂಜಿನಗರದ ನಿವಾಸಿ ತನ್ವೀರ್ ಪಾಷಾ ಎಂಬುವವರ ಪುತ್ರ ತಾಹೀರ್ ಪಾಷಾ(೫) ಮೃತ ದುರ್ದೈವಿ. ಸೆ.೧೧ರಂದು ಸಂಜೆ ೬ ಗಂಟೆಗೆ ನಾಗವಾರದ ಕುಪ್ಪಸ್ವಾಮಿ ಲೇಔಟ್‌ನ ೧೦ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಗೂಡ್ಸ್ ವಾಹನ ಜಪ್ತಿ ಮಾಡಿದ್ದು, ಅದರ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ತನ್ವೀರ್ ಪಾಷಾ ಅವರು ಪತ್ನಿ ಮತ್ತು ಮಗನೊಂದಿಗೆ ಕುಪ್ಪುಸ್ವಾಮಿ ಲೇಔಟ್‌ನಲ್ಲಿನ ಮಾವನ ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ತಾಹೀರ್ ಪಾಷಾ ಅಂದು ರಸ್ತೆಯಲ್ಲಿ ಓಡಿ ಬರುವಾಗ ರಸ್ತೆ ಬದಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನದ ಹ್ಯಾಂಡಲ್‌ಗೆ ಗುದ್ದಿಕೊಂಡಿದ್ದಾನೆ. ಈ ವೇಳೆ ಆಯತಪ್ಪಿ ಬಾಲಕ ರಸ್ತೆಗೆ ಬಿದ್ದಿದ್ದಾನೆ. ಇದೇ ಸಮಯಕ್ಕೆ ಹಿಂದೆ ಬರುತ್ತಿದ್ದ ಗೂಡ್ಸ್ ವಾಹನದ ಹಿಂದಿನ ಎಡಚಕ್ರಗಳು ಬಾಲಕನ ತಲೆ ಮೇಲೆ ಹರಿದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನ್ನು ಸ್ಥಳೀಯರು ಹಾಗೂ ಕುಟುಂಬದವರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಈಗಾಗಲೇ ಬಾಲಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಮೃತ ಬಾಲಕನ ತಂದೆ ತನ್ವೀರ್ ಪಾಷಾ ನೀಡಿದ ದೂರಿನ ಮೇರೆಗೆ ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ದೃಶ್ಯಾವಳಿ ಘಟನಾ ಸ್ಥಳದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net