ಫೇಸ್​ಬುಕ್​ನಲ್ಲಿ ಅಶ್ಲೀಲ ವಿಡಿಯೋ ಹಾಕುತ್ತಿದ್ದ ಬಾಲಕ ಏನಾದ ಗೊತ್ತಾ?

porn
Published on

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ದ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಕೃತ್ಯಕ್ಕೆ ತಂದೆಗೂ ಸಂಕಷ್ಟ ಎದುರಾಗಿದೆ.

ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಸಂನ 16 ವರ್ಷದ ಬಾಲಕ ತನ್ನ ತಂದೆಯ ಮೊಬೈಲ್​ ಮೂಲಕ ಫೇಸ್​ಬುಕ್​ ಖಾತೆ ತೆರೆದು ಅದರಲ್ಲಿ ಪೋರ್ನ್​ ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ದ. ಮಗನ ಕೃತ್ಯ ಸ್ವತಃ ತಂದೆಗೇ ಗೊತ್ತಿರಲಿಲ್ಲವಂತೆ!

ಅಶ್ಲೀಲ ವಿಡಿಯೋ ಅಪ್ಲೋಡ್​ ಮಾಡುತ್ತಿದ್ದವನ ಪತ್ತೆಗೆ ಪಾಪನಾಸಂ ಉಪ ಪೊಲೀಸ್ ವರಿಷ್ಠಾಧಿಕಾರಿ ನಂದಗೋಪಾಲ್​ ನೇತೃತ್ವದ ತಂಡ ಮತ್ತು ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು. ಪ್ರಕರಣದ ಮಾಹಿತಿ ಕಲೆ ಹಾಕಲು 'ಸೋಶಿಯಲ್ ಮೀಡಿಯಾ ಸೆಲ್’ನ ಸಹಾಯ ಪಡೆಯಲಾಗಿತ್ತು. ಪ್ರಮುಖ ಆರೋಪಿಯ ಜಾಡು ಹಿಡಿದ ಪೊಲೀಸರಿಗೆ ಶಾಕ್​ ಕಾದಿತ್ತು!

ಈ ಕೃತ್ಯ ಎಸಗಿದ್ದು ಅಪ್ರಾಪ್ತ ಬಾಲಕ. ತನ್ನ ಫೇಸ್‍ಬುಕ್ ಖಾತೆಯಿಂದ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ಬಾಲಕ ಈಗಷ್ಟೇ ಪ್ರಥಮ ಪಿಯು ಪರೀಕ್ಷೆ ಬರೆದವ. ಫೇಸ್‍ಬುಕ್ ಖಾತೆ ತೆರೆಯಲು ತನ್ನ ತಂದೆಯ ಮೊಬೈಲ್ ಫೋನ್ ಬಳಸಿದ್ದಾನೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಬಾಲಕನ ಜತೆಗೆ ಆತನ ತಂದೆಯನ್ನೂ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಪೋಕ್ಸೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ ಮೊಬೈಲ್​ ಮತ್ತು ಲ್ಯಾಪ್​ಟಾಪ್​ ಅನ್ನು ಪಾಪನಾಸಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓದುವ ವಯಸ್ಸಲ್ಲಿ ಅಶ್ಲೀಲತೆ ಬಗ್ಗೆ ತಲೆಕೆಡಿಸಿಕೊಂಡ ಬಾಲಕನೀಗ ಕಾನೂನು ಕ್ರಮ ಎದುರಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net