ರಾಜಧಾನಿಯಲ್ಲಿ ಭಾರೀ ಸ್ಫೋಟ ಸಂಭವಿಸಿ ಬಾಲಕ ಸಾವು

bomb
Published on

ಬೆಂಗಳೂರು: ಸ್ವಾತಂತ್ರೃ ದಿನಾಚರಣೆ ದಿನವೇ ನಗರದಲ್ಲಿ ಭಾರೀ ಸ್ಫೋಟ ಸಂಭವಿಸಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಈ ಸ್ಫೋಟದಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಜಧಾನಿಯ ಜನತೆಯೂ ಬೆಚ್ಚಿ ಬಿದ್ದಿದ್ದರು.

ವಿಲ್ಸನ್‌ಗಾರ್ಡನ್‌ನ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲನಿಯಲ್ಲಿ ಶುಕ್ರವಾರ ಬೆಳಗ್ಗೆ ೮ ಗಂಟೆಗೆ ಈ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ೧೦ ವರ್ಷದ ಬಾಲಕ ಮೃತಪಟ್ಟಿದ್ದು, ೯ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿನ್ನಯ್ಯಪಾಳ್ಯ ನಿವಾಸಿ ಅಮಾನುಲ್ಲಾ ಮತ್ತು ರಬೀನಾ ದಂಪತಿ ಪುತ್ರ ಮುಬಾರಕ್(೧೦) ಮೃತ ಬಾಲಕ. ಕಸ್ತೂರಮ್ಮ(೩೫), ಸರಸಮ್ಮ(೫೦), ಶಬ್ರಿನ್‌ಬಾನು(೩೫), ಫಾತೀಮಾ(೮), ಕಾಯಲಾ(೮), ಸುಬ್ರಮಣಿ(೬೨), ಪ್ರಮೀಳಾ(೩೮) ಮತ್ತು ರಾಜೇಶ್(೪೦) ಗಾಯಗೊಂಡವರು. ಗಾಯಾಳುಗಳು ವಿಕ್ಟೋರಿಯಾ, ಸಂಜಯ್‌ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಕಸ್ತೂರಮ್ಮ ಮತ್ತು ಸರಸಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೫ ತಂಡಗಳಿಂದ ಪರಿಶೀಲನೆ:

ಚಿನ್ನಯ್ಯಪಾಳ್ಯದಲ್ಲಿ ಶ್ರೀರಾಮ ಕಾಲನಿಯಲ್ಲಿರುವ ಸರಸಮ್ಮ ವಠಾರ ಎಂದು ಕರೆಯುವ ಇಕ್ಕಟ್ಟಾದ ಜಾಗದಲ್ಲಿ ೧೪ ಹೆಚ್ಚು ಚಿಕ್ಕ ಚಿಕ್ಕ ಮನೆಗಳಿವೆ. ಅಯ್ಯಪ್ಪ ಮತ್ತು ಕಸ್ತೂರಮ್ಮ ದಂಪತಿ ಮನೆಯಲ್ಲಿ ಬೆಳಗ್ಗೆ ೮.೧೦ ಕ್ಕೆ ಏಕಾಏಕಿ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ, ಸೊಕೋ ತಂಡ, ಐಡಿಆರ್‌ಎ್, ಐಎಸ್‌ಡಿ ತಂಡಗಳು ಆಗಮಿಸಿ ಪರಿಶೀಲಿಸಿದೆ. ಹೀಗಾಗಿ ಪ್ರಾಥಮಿಕ ಮಾಹಿತಿ ಪ್ರಕಾರ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಈ ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅವಶೇಷಗಳಡಿ ಸಿಲುಕಿ ಬಾಲಕ ಸಾವು

ಇಲ್ಲಿನ ೧೪ ಮನೆಗಳಲ್ಲಿ ವಾಸವಾಗಿರುವವರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಕೆಲವು ಗಾರ್ಮೆಂಟ್ಸ್ ಕೆಲಸಕ್ಕೆ ಹೋದರೆ, ಇನ್ನು ಕೆಲವರು ಸಣ್ಣ-ಪುಟ್ಟ ದಿನಗೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಬೆಳಗ್ಗೆ ಕಸ್ತೂರಮ್ಮ ಪತಿ ಅಯ್ಯಪ್ಪ ಕೆಲಸ ನಿಮಿತ್ತ ಮನೆಯಿಂದ ಹೊರಗಡೆ ಹೋಗಿದ್ದಾರೆ. ಬಳಿಕ ೧೦ ನಿಮಿಷಗಳಲ್ಲೇ ಸ್ಫೋಟ ಸಂಭವಿಸಿದ್ದು, ಗೋಡೆ ಮತ್ತು ಮೇಲ್ಛಾವಣಿ ಕುಸಿದು ಬಿದ್ದಿದ್ದೆ. ಆಗ ಪಕ್ಕದ ಮನೆಯಲ್ಲಿದ್ದ ಮುಬಾರಕ್ ಮೇಲೆ ಅವಶೇಷಗಳು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ.

೩ ಮನೆಗಳು ಧ್ವಂಸ, ೧೧ ಮನೆಗಳಿಗೆ ಹಾನಿ

ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬಂದು ರಕ್ಷಣಾ ಕಾರ್ಯ ಆರಂಭಿಸಿದರು. ಕೂಡಲೇ ಹಾನಿಗೊಂಡಿದ್ದ ಮೂರು ಮನೆಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರು, ಬಾಲಕಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಘಟನೆಯಲ್ಲಿ ವಠಾರದಲ್ಲಿದ್ದ ಇತರೆ ೧೧ ಮನೆಗಳಿಗೂ ಹಾನಿಯಾಗಿವೆ. ಗೋಡೆಗಳು ಮತ್ತು ಮೇಲ್ಛಾವಣಿ ಬಿರುಕುಗೊಂಡಿದೆ. ಹೀಗಾಗಿ ಆ ಮನೆಗಳಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net