ಕಾಲ, ಸಮಾಜ, ಮಾನವನ ಭಾವನೆಗಳ ಪ್ರತಿಬಿಂಬ ಪುಸ್ತಕ

blm (7)
Published on

ಕಾರ್ಕಳ: ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಇಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು. ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಕ್ರಿಯೇಟಿವ್ ಪುಸ್ತಕಮನೆ ವತಿಯಿಂದ ನಡೆದ ಪುಸ್ತಕಧಾರೆ- 22 ಕೃತಿಗಳ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ ಮತ್ತು ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆಯೇ ಆಗಿದೆ. ವಿಶ್ವದ ಜ್ಞಾನ ಪ್ರತಿ ಮಗುವಿಗೂ ಪುಸ್ತಕದ ಮೂಲಕ ದಕ್ಕಬೇಕಾಗಿದೆ. ಪುಸ್ತಕದಿಂದಲೇ ಮನುಷ್ಯನ ಮರುಹುಟ್ಟು ಸಾಧ್ಯ ಎಂದರು. ಸಹ ಸಂಸ್ಥಾಪಕ ಅಶ್ವತ್ಥ್ ಎಸ್.ಎಲ್.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಡಾ.ನಾಗತಿಹಳ್ಳಿ, ಡಾ.ಕೆ.ಚಿನ್ನಪ್ಪ ಗೌಡ ಹಾಗೂ 22 ಕೃತಿಗಳ ಕರ್ತೃಗಳನ್ನು ಗೌರವಿಸಲಾಯಿತು. ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಕಸಾಪ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಮಹಾಕಾವ್ಯಗಳ ಲೇಖಕ ಡಾ.ಪ್ರದೀಪಕುಮಾರ ಹೆಬ್ರಿ, ಸಹ ಸಂಸ್ಥಾಪಕ ಅಮೃತ್ ರೈ, ಗಣನಾಥ ಶೆಟ್ಟಿ ಬಿ., ಗಣಪತಿ ಭಟ್ ಕೆ.ಎಸ್., ವಿಮಲ್ ರಾಜ್ ಜಿ., ಆದರ್ಶ ಎಂ.ಕೆ., ಉಪನ್ಯಾಸಕ, ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಲೋಹಿತ್ ಎಸ್.ಕೆ. ನಿರೂಪಿಸಿ, ವಂದಿಸಿದರು.

ಅನಾವರಣಗೊಂಡ ಕೃತಿಗಳು

ಯಾತ್ರೆ, ವಿಜ್ಞಾನ ಕೌತುಕಗಳ ಮಹಾಯಾನ, ಹರ್ಷ ರಾಗ, ಹಿತಶತ್ರು, ಪುಟ್ಟ ದೇವರ ಕಣ್ಣೀರು, ಬದುಕು ಮಾಯೆಯ ಮಾಟ, ಕಾವ್ಯ ಧ್ಯಾನ, ನಿನಗೆ ನೀನೇ ಬೆಳಕು, ನಿನ್ನ ಇಚ್ಛೆಯಂತೆ ನಡೆವೆ, ಕಣ್ಣ ಬಾಗಿಲಿಗೆ ಬಂದ ನೀರು, ಸ್ವಾತಿ ಬೊಂಬಾಟ್, ಗ್ಯಾಂಗ್‌ಸ್ಟರ್ ಮತ್ತು ಅವಳು, ಇದೊಳ್ಳೆ ವರಸೆ, ಮಾಂಡವ್ಯ ದೀಪ, ಬೆಳ್ದೀಪ, ನಿಲುಕದ ನಕ್ಷತ್ರ, ಸಿಹಿಜೀವಿ ಕಂಡ ಅಂಡಮಾನ್, ಅನುಭವ ದೀಪ್ತಿ, ಈ ಪಯಣದಲ್ಲಿ, ಸಂಗೀತ ಶರಧಿ, ಅಸಂಗತ, ವಿಜ್ಞಾನ ವಿಶಾರದರು ಕೃತಿಗಳನ್ನು ಅನಾವರಣಗೊಳಿಸಲಾಯಿತು.

ಭಾವಗೀತೆಗಳ ಗಾಯನ

ಸಭಾ ಕಾರ್ಯಕ್ರಮ ಬಳಿಕ ನಾಗತಿಹಳ್ಳಿ ಚಂದ್ರಶೇಖರ ಅವರ ಚಲನಚಿತ್ರಗಳಲ್ಲಿ ಬಳಸಿರುವ ಭಾವಗೀತೆಗಳ ಗಾಯನದ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ಸಂವಾದ ಕಾರ್ಯಕ್ರಮ ನಿರ್ವಹಿಸಿಕೊಟ್ಟರು. ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಯಶವಂತ್ ಎಂ.ಜಿ. ಅವರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net