

ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಗ್ರಂಥಾಲಯ ದಿನಾಚರಣೆ ಆಚರಿಸಲಾಯಿತು.
ಹೆಬ್ರಿ ಸಾರ್ವಜನಿಕ ಗ್ರಂಥಾಲಯ ಮೇಲ್ವಿಚಾರಕಿ ಪುಷ್ಪಾವತಿ ಶೆಟ್ಟಿ ಮಾತನಾಡಿ, ಪುಸ್ತಕದ ಜೊತೆ ಗೆಳೆತನ ಮಾಡಿದರೆ ಮುಂದೆ ಒಂದು ದಿನ ಇಡೀ ಜಗತ್ತೇ ನಮ್ಮ ಸ್ನೇಹಕ್ಕಾಗಿ ಕಾಯುವ ಹಾಗೆ ಪುಸ್ತಕ ಮಾಡುತ್ತದೆ. ಎಲ್ಲ ವಿದ್ಯಾರ್ಥಿಗಳು ದಿನದಲ್ಲಿ ಕನಿಷ್ಠ ಎರಡು ಗಂಟೆಯಾದರೂ ಅಮೂಲ್ಯವಾದ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯಬೇಕು ಎಂದರು.
ಪ್ರಾಂಶುಪಾಲ ಡಾ.ವಿದ್ಯಾಧರ ಹೆಗಡೆ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಅಮೂಲ್ಯವಾದ ಸಾವಿರಾರು ಪುಸ್ತಕಗಳ ಭಂಡಾರವೇ ಇದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ಗ್ರಂಥಾಲಯವನ್ನೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅರುಣಾಚಲ, ಪ್ರವೀಣ್ ಶೆಟ್ಟಿ, ಜ್ಯೋತಿ, ಡಾ.ಮೇವಿ ಮಿರಾಂಡ, ಉಷಾಲತಾ ಉಪಸ್ಥಿತರಿದ್ದರು. ಗ್ರಂಥಪಾಲಕ ಪದ್ಮನಾಭ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಗಣೇಶ ಎಸ್. ವಂದಿಸಿದರು.