ನಕ್ಸಲ್​ಮುಕ್ತ ಭಾರತದತ್ತ ದಿಟ್ಟ ಹೆಜ್ಜೆ! ಕೊನೆಗೊಳ್ಳಲಿದೆ ಕೆಂಪುಉಗ್ರರ ಹಾವಳಿ

Untitled design (4)
Published on

ಭಾರತಕ್ಕೆ ಐದು ದಶಕಗಳಿಂದ ಕಾಡುತ್ತಿರುವ ಕೆಂಪು ಭಯೋತ್ಪಾದನೆ ಅಂದರೆ ನಕ್ಸಲ್​ವಾದ ಕೊನೆಗೂ ಅವಸಾನದ ಹಂತಕ್ಕೆ ತಲುಪಿದೆ. ದೇಶದ ಆಂತರಿಕ ಭದ್ರತೆಗೆ ಮಾರಕವಾಗಿ, ಹನ್ನೊಂದು ರಾಜ್ಯಗಳಲ್ಲಿ ‘ಕೆಂಪುಮಾರ್ಗ’ವನ್ನು ವಿಸ್ತರಿಸಿ, ಜನಸಾಮಾನ್ಯರ, ಪೊಲೀಸ್ ಪಡೆಗಳ, ಭದ್ರತಾ ಪಡೆಗಳ ರಕ್ತ ಹರಿಸಿದ್ದ ನಕ್ಸಲರು ಚುನಾವಣೆ ವ್ಯವಸ್ಥೆಗೆ ಭಂಗ ತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರು. ನಕ್ಸಲರ ಚಲನವಲನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಗ್ರಾಮಸ್ಥರನ್ನು ಅಥವಾ ಬುಡಕಟ್ಟು ಜನರನ್ನು ಕ್ರೂರವಾಗಿ ಹಿಂಸಿಸುತ್ತಿದ್ದರು. ಜನಸಾಮಾನ್ಯರ ಮಾರಣಹೋಮ, ಭದ್ರತಾ ಪಡೆಗಳ ಬಲಿದಾನಕ್ಕೆ ಕೊನೆಯೇ ಇಲ್ಲವೆ ಎಂಬ ಪ್ರಶ್ನೆ ಎದುರಾದಾಗಲೆಲ್ಲ ಸಿಗುವ ಉತ್ತರ ನಿರಾಶಾದಾಯಕವಾಗಿಯೇ ಇರುತ್ತಿತ್ತು. ಆದರೆ, ಕಳೆದೊಂದು ದಶಕದಲ್ಲಿ ನಕ್ಸಲರ ವಿರುದ್ಧದ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

ಅದರಲ್ಲೂ 2024 ಮತ್ತು 2025ರಲ್ಲಿ ನಕ್ಸಲರ ವಿರುದ್ಧ ನಡೆಸಲಾದ ಸರಣಿ ಎನ್​ಕೌಂಟರ್​ಗಳಲ್ಲಿ ನಕ್ಸಲ್ ಸಂಘಟನೆಗಳ ಪ್ರಮುಖ ನಾಯಕರು, ಕಮಾಂಡರಗಳು ಹತರಾಗಿದ್ದು, ದೇಶದಲ್ಲಿ ಪ್ರಸಕ್ತ ಬರೀ 14 ನಕ್ಸಲ್ ಕಮಾಂಡರ್​ಗಳು ಬದುಕುಳಿದಿದ್ದಾರೆ. ಹೀಗಾಗಿ ಕಮ್ಯುನಿಸ್ಟ್ ಪಾರ್ಟಿ ಮಾವೋವಾದಿ-ಸಿಪಿಐ (ಎಂ) ಕದನವಿರಾಮಕ್ಕೆ ಮನವಿ ಮಾಡಿದೆ. ಮಾತ್ರವಲ್ಲ, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮಾತುಕತೆಗೆ ಸಿದ್ಧ ಎಂದೂ ಹೇಳಿದೆ. ಕಳೆದ ಕೆಲ ತಿಂಗಳಲ್ಲೇ ಛತ್ತೀಸ್​ಗಢದಲ್ಲಿ ಹಲವು ಕುಖ್ಯಾತ ನಕ್ಸಲ್ ಮುಖಂಡರು ಸರ್ಕಾರಕ್ಕೆ ಶರಣಾಗಿದ್ದಾರೆ. ಮಾತ್ರವಲ್ಲ, 2024-25ರಲ್ಲಿ 400ಕ್ಕೂ ಹೆಚ್ಚು ನಕ್ಸಲರು ಎನ್​ಕೌಂಟರ್​ಗಳಲ್ಲಿ ಹತರಾಗಿರುವುದನ್ನು ಸಿಪಿಐ (ಎಂ) ಒಪ್ಪಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ 2024ರ ಆಗಸ್ಟ್ 24ರಂದು ಮಹತ್ವದ ಹೇಳಿಕೆ ನೀಡಿ, ‘ದೇಶದಲ್ಲಿ ಮಾವೋವಾದಿ ಉಗ್ರವಾದ ಅಂದರೆ ನಕ್ಸಲಿಜಂನ್ನು ಬೇರು ಸಮೇತ ನಿಮೂಲನಗೊಳಿಸುವ ಸಮಯ ಬಂದಿದೆ.

2026ರ ಮಾರ್ಚ್ 31ರ ಮೊದಲು ದೇಶ ನಕ್ಸಲ್​ವಾದದಿಂದ ಮುಕ್ತಗೊಳ್ಳಲಿದೆ’ ಎಂದಿದ್ದರು. ಅದರಂತೆ, ನಕ್ಸಲ್​ವಾದ ಶಕ್ತಿ ಕಳೆದುಕೊಂಡಿದ್ದು, ಭದ್ರತಾ ಪಡೆಗಳು, ಆಯಾ ರಾಜ್ಯಗಳ ಪೊಲೀಸರ ಶ್ರಮ, ತ್ಯಾಗ, ಬಲಿದಾನದ ಫಲವಾಗಿ ಕೆಂಪು ಉಗ್ರವಾದ ಕೊನೆಯ ಹಂತದಲ್ಲಿದೆ. ಭಾರತವನ್ನು 2026ರ ಮಾರ್ಚ್ 31ರೊಳಗೆ ನಕ್ಸಲ್​ಮುಕ್ತವನ್ನಾಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದರು. ಆದರೆ, ಅವಧಿಪೂರ್ವವೇ ದೇಶದಲ್ಲಿ ನಕ್ಸಲ್ ಹಾವಳಿ ಕೊನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇಡೀ ದೇಶದಲ್ಲಿ ಪ್ರಸಕ್ತ ಬರೀ 14 ನಕ್ಸಲ್ ಕಮಾಂಡರ್​ಗಳು ಬದುಕುಳಿದಿದ್ದು, 2025ರ ಮಹತ್ವದ ಎನ್​ಕೌಂಟರ್​ಗಳಲ್ಲಿ ಪ್ರಭಾವಿ ನಕ್ಸಲ್ ನಾಯಕರು ಹತರಾಗಿದ್ದಾರೆ. ಹೀಗಾಗಿ ಕದನವಿರಾಮಕ್ಕಾಗಿ ನಕ್ಸಲ್ ಸಂಘಟನೆಯೇ ಮೊರೆ ಇಟ್ಟಿದ್ದು, ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

ಪತ್ರದಲ್ಲಿ ಏನಿದೆ?

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಆಗಸ್ಟ್ 15ರಂದು ಹೊರಡಿಸಿರುವ ಪತ್ರ ನಕ್ಸಲ್ ಮುಖಂಡ ಹಾಗೂ ಸಿಪಿಐ (ಎಂ) ವಕ್ತಾರ ಅಭಯ್ ಹೆಸರಿನಲ್ಲಿದೆ. ಅದರಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖ ಅಂಶಗಳು.

  • ನಾವು ಸಶಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದ್ದೇವೆ. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಭವಿಷ್ಯದಲ್ಲಿ ನಾವು ಎಲ್ಲ ರಾಜಕೀಯ ಪಕ್ಷಗಳು, ಸಂಸ್ಥೆಗಳ ಜತೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತೇವೆ. ಈ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ. ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ನಿಲ್ಲಿಸಿದರೆ ಶಾಂತಿ ಮಾತುಕತೆ ನಡೆಸಲು ಬದ್ಧರಾಗಿದ್ದೇವೆ.
  • ಒಂದು ತಿಂಗಳ ಮಟ್ಟಿಗೆ ಕದನವಿರಾಮ ಘೋಷಿಸಬೇಕು ಮತ್ತು ದೇಶದ ವಿವಿಧ ಜೈಲುಗಳಲ್ಲಿರುವ ನಮ್ಮ ಸಹವರ್ತಿಗಳ ಅಭಿಪ್ರಾಯ ಪಡೆಯಲು ಅವಕಾಶ ನೀಡಿ, ಒಂದು ತಿಂಗಳ ಸಮಯ ನೀಡಬೇಕು. ಈ ವಿಷಯದ ಬಗ್ಗೆ ಸರ್ಕಾರದೊಂದಿಗೆ ವಿಡಿಯೋ ಕಾಲ್ ಮೂಲಕ ಚರ್ಚೆ ನಡೆಸಲು ಸಿದ್ಧರಿದ್ದೇವೆ.
  • ಸರ್ಕಾರದಿಂದ ಪ್ರತಿಕ್ರಿಯೆ ಇಲ್ಲ: ನಕ್ಸಲರ ಕದನವಿರಾಮ ಮನವಿಗೆ ಈವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ನಕ್ಸಲ್ ಪ್ರಭಾವ ಇಳಿಕೆಗೆ ಕಾರಣ

  • ಕೇಂದ್ರ ಸರ್ಕಾರದ ಪ್ರಬಲ ಇಚ್ಛಾಶಕ್ತಿ, ನಕ್ಸಲ್ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ ರಚನೆ. ಭದ್ರತಾ ಪಡೆಗಳಿಗೆ ವಿಶೇಷ ವಾಹನ, ಬುಲೆಟ್ ಪ್ರೂಫ್ ಜಾಕೆಟ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಪೂರೈಕೆ.
  • ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ವಿಸ್ತರಿಸುವುದರ ಜತೆಗೆ, ಕೌಶಲಾಭಿವೃದ್ಧಿ, ಗುಣಮಟ್ಟದ ಶಿಕ್ಷಣ, ವಿದ್ಯುತ್ ಮತ್ತು ಡಿಜಿಟಲ್ ಕನೆಕ್ಟಿವಿಟಿಯನ್ನು ಹೆಚ್ಚಿಸಲಾಗಿದೆ. ಈವರೆಗೆ ನಕ್ಸಲ್​ಪೀಡಿತ ಪ್ರದೇಶಗಳಲ್ಲಿ 14,618 ಕಿ.ಮೀ. ರಸ್ತೆ ನಿರ್ವಣಗೊಂಡಿದೆ. ಅಲ್ಲದೆ, ಹೊಸ ಐಟಿಐ, ಏಕಲವ್ಯ ಮಾದರಿಯ ಶಾಲೆಗಳು, ಕೌಶಲಾಭಿವೃದ್ಧಿ ಕೇಂದ್ರಗಳು ಮತ್ತು ಆರ್ಥಿಕ ಒಳಗೊಳ್ಳುವಿಕೆಗಾಗಿ ಬ್ಯಾಂಕುಗಳು ಆರಂಭಗೊಂಡಿವೆ.
  • ನಕ್ಸಲ್​ಪೀಡಿತ ಜಿಲ್ಲೆಗಳಿಗೆ 1 ಸಾವಿರ ಕೋಟಿ ರೂ. ವಿಶೇಷ ಯೋಜನೆ. ಈ ಹಣ ಬಳಸುವ ಅಧಿಕಾರ ಜಿಲ್ಲಾಡಳಿತಕ್ಕೆ ನೀಡಿ, ಇದರಿಂದ ಶಿಕ್ಷಣ ಸೇರಿ ಇತರ ಮೂಲಸೌಕರ್ಯ ಅಭಿವೃದ್ಧಿ.
  • ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 40 ಹೆಕ್ಟೇರ್ ಅರಣ್ಯ ಭೂಮಿ ಬಳಕೆ.
  • ಭದ್ರತಾ ಪಡೆಗಳ ಆಧುನೀಕರಣಕ್ಕೆ ಅನುದಾನ.
  • ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ. ನಕ್ಸಲ್ ಪಡೆಯ ಪ್ರಭಾವಿಗಳು ಶರಣಾದರೆ ಪರಿಹಾರ ಮೊತ್ತ ಹೆಚ್ಚಳ.

ತಜ್ಞರು ಹೇಳುವುದೇನು?

ದೇಶದಲ್ಲಿ ಈಗ ನಕ್ಸಲಿಜಂ ಚಳವಳಿ ಕೊನೆಯ ಹಂತದಲ್ಲಿದೆ. ಅವರಿಗೆ ದೊರೆಯುತ್ತಿದ್ದ ಹಣಕಾಸು ಮೂಲಗಳನ್ನು ಕತ್ತರಿಸಲಾಗಿದ್ದು, ಶಸ್ತ್ರಾಸ್ತ್ರಗಳು ಮಾವೋ ಉಗ್ರರ ಕೈಗೆ ಸಿಗುತ್ತಿಲ್ಲ. ಮುಖ್ಯವಾದಿ, ನಕ್ಸಲ್ ಸಂಘಟನೆಗಳ ನಡುವಿನ ಆಂತರಿಕ ಸಂವಹನ ಬಂದ್ ಆಗಿದೆ. ಹೀಗಾಗಿ, ಈ ಸಂಘಟನೆಯ ಮುಖಂಡರೇ ಶರಣಾಗತಿಗೆ ಮುಂದೆ ಬರುತ್ತಿದ್ದಾರೆ. ಆದರೆ, ಸರ್ಕಾರ ಕಳೆದ 18 ತಿಂಗಳುಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ನೀಡಿರುವ ವೇಗವನ್ನು ಗಮನಿಸಿದರೆ, ಮಾತುಕತೆಯ ಪ್ರಸ್ತಾಪವನ್ನು ಅದು ಒಪು್ಪವುದಿಲ್ಲ. ಒಂದು ವೇಳೆ ಮಾತುಕತೆಗೆ ಮುಂದಾದರೂ, ನಕ್ಸಲ್ ಸಂಘಟನೆಗಳ ಷರತ್ತುಗಳನ್ನು ಒಪು್ಪವುದಿಲ್ಲ.

ರಕ್ತಸಿಕ್ತ ಅಧ್ಯಾಯ

ದೇಶದಲ್ಲಿ ನಕ್ಸಲ್​ವಾದ ಮೂರು ಹಂತಗಳಲ್ಲಿ ಹರಡಿಕೊಂಡಿತು. ದೇಶದ 10 ರಾಜ್ಯಗಳ 90 ಜಿಲ್ಲೆಗಳಲ್ಲಿ ನಕ್ಸಲ್ ಪ್ರಭಾವವಿತ್ತು. ಇವುಗಳಲ್ಲಿ 32 ಜಿಲ್ಲೆಗಳು 2017ರ ಆರಂಭದಿಂದ ಯಾವುದೇ ನಕ್ಸಲ್ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿಲ್ಲ. 2024ರ ವೇಳೆಗೆ ನಕ್ಸಲ್​ಪೀಡಿತ ಜಿಲ್ಲೆಗಳ ಸಂಖ್ಯೆ 44ಕ್ಕೆ ತಗ್ಗಿತು.

ಹಂತ 1 1967-1973

ಪಶ್ಚಿಮ ಬಂಗಾಳ, ಬಿಹಾರ ಮತ್ತು ಆಂಧ್ರಪ್ರದೇಶದ ಕೆಲ ಭಾಗಗಳಿಗೆ ನಕ್ಸಲ್ ಆಂದೋಲನ ಸೀಮಿತವಾಗಿತ್ತು. ಈ ಅವಧಿಯಲ್ಲಿ ಜಮೀನುದಾರರಿಂದ ಜಮೀನುಗಳನ್ನು ಕಸಿದುಕೊಳ್ಳುತ್ತಿದ್ದರು ಮತ್ತು ಪೊಲೀಸರಿಂದ ಬಚಾವಾಗಲು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು. 1972ರಲ್ಲಿ ಕುಖ್ಯಾತ ನಕ್ಸಲ್ ನಾಯಕ ಚಾರು ಮಜುಂದಾರ್​ನ ಹತ್ಯೆಯಾಯಿತು. 1973ರ ಹೊತ್ತಿಗೆ ಪೊಲೀಸರು ನಕ್ಸಲರ ಎಲ್ಲ ಪಾವರ್ ಸೆಂಟರ್​ಗಳನ್ನು ನಷ್ಟಗೊಳಿಸಿದರು. 1973ರ ಹೊತ್ತಿಗೆ ದೇಶಾದ್ಯಂತ 32 ಸಾವಿರ ನಕ್ಸಲರು ಮತ್ತು ಅವರ ಸಮರ್ಥಕರು ಜೈಲಿನಲ್ಲಿ ಬಂಧಿಯಾಗಿದ್ದರು.

ಹಂತ 2 1974-1990

ಈ ಅವಧಿಯಲ್ಲಿ ನಕ್ಸಲ್ ಆಂದೋಲನ ಒಟ್ಟಾಗಿ ಸಾಗದೆ 40ಕ್ಕೂ ಅಧಿಕ ಸಂಘಟನೆ/ಗುಂಪುಗಳ ನಡುವೆ ಹಂಚಿಹೋಯಿತು. ಈ 40 ಗುಂಪುಗಳನ್ನು ಒಟ್ಟಿಗೆ ತರಲು ನಕ್ಸಲ್ ಮುಖಂಡರು ಯತ್ನಿಸಿದರಾದರೂ, ಹೇಳಿಕೊಳ್ಳುವಂಥ ಯಶಸ್ಸು ದೊರೆಯಲಿಲ್ಲ. ಆದರೆ, ಈ ಅವಧಿಯಲ್ಲಿ ನಕ್ಸಲರು ವನವಾಸಿ ಪ್ರದೇಶಗಳಲ್ಲಿ ಪ್ರವೇಶಿಸಿ, ಪ್ರಭಾವ ಹೆಚ್ಚಿಸಿಕೊಂಡರು. ಈ ಅವಧಿಯಲ್ಲಿ ನಕ್ಸಲರು ಗೆರಿಲ್ಲಾ ಯುದ್ಧತಂತ್ರವನ್ನು ಬಳಸಿದರಲ್ಲದೆ, ಪೊಲೀಸರು, ಇತರ ಭದ್ರತಾ ಪಡೆಗಳಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ಅಲ್ಲದೆ, ನಕ್ಸಲರ ‘ರೆಡ್ ಕಾರಿಡಾರ್’ ನಿರ್ಮಾಣವಾಗತೊಡಗಿತು. ಭದ್ರತಾ ಪಡೆಗಳು ಕಾರ್ಯಾಚರಣೆಯ ವೇಗ ಹೆಚ್ಚಿಸಿದಾಗ ಈ ಅವಧಿಯಲ್ಲಿ 9 ಸಾವಿರ ನಕ್ಸಲರು ಶರಣಾದರು.

ಹಂತ 3 2005-2011

ಈ ಅವಧಿಯಲ್ಲಿ ನಕ್ಸಲ್ ಹಿಂಸಾಚಾರ ಅತಿರೇಕಕ್ಕೆ ತಲುಪಿತು. ಹಲವು ನಕ್ಸಲ್ ಸಂಘಟನೆಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ಪ್ರಮುಖ ಕಾರಣ. 2007ರಲ್ಲಿ ದೇಶದ 200ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲ್​ಪೀಡಿತವಾಗಿದ್ದವು. ಸ್ಫೋಟ ಕೃತ್ಯಗಳನ್ನು ಗಣನೀಯವಾಗಿ ಹೆಚ್ಚಿಸಿದ ನಕ್ಸಲರು ಆದಿವಾಸಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಲೋಕ ಅದಾಲತ್​ಗಳನ್ನೂ ನಡೆಸಿದರು. ಈ ಅವಧಿಯಲ್ಲಿ ಛತ್ತೀಸ್​ಗಢ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಮಹಾರಾಷ್ಟ್ರ ತೆಲಂಗಾಣ, ಮಧ್ಯಪ್ರದೇಶ, ಆಂಧ್ರಪ್ರದೇಶ, ಬಿಹಾರಕ್ಕೆ ರೆಡ್ ಕಾರಿಡಾರ್ ವಿಸ್ತಾರಗೊಂಡಿತು. ಆದರೆ, 2015ರ ನಂತರ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರ ಸ್ವರೂಪ ಪಡೆದುಕೊಂಡಿತು. ಆರಂಭಿಕ ಹಂತದಲ್ಲಿ ನಕ್ಸಲರು ಪ್ರತಿದಾಳಿ ನಡೆಸಿದರೂ 2018ರ ಬಳಿಕ ಭದ್ರತಾಪಡೆಗಳು ಮೇಲುಗೈ ಸಾಧಿಸಿ, 2025ರ ಹೊತ್ತಿಗೆ ರೆಡ್ ಕಾರಿಡಾರ್ ವ್ಯಾಪ್ತಿ ಮತ್ತು ಪ್ರಭಾವ ಗಣನೀಯವಾಗಿ ಕಡಿಮೆಯಾಗಿದೆ.

ಎಷ್ಟು ಜನ ಸಕ್ರಿಯ?

ಪೊಲೀಸ್ ಮೂಲಗಳ ಪ್ರಕಾರ, 2025ರ ಮಾರ್ಚ್​ನ ಹೊತ್ತಿಗೆ ದೇಶದಲ್ಲಿ ಸಿಪಿಐ (ಎಂ)ನ ಕೇಂದ್ರೀಯ ಸಮಿತಿಯಲ್ಲಿ 14 ಸಕ್ರಿಯ ಕಮಾಂಡರ್​ಗಳು ಮತ್ತು 1,200 ನಕ್ಸಲರು ಸಕ್ರಿಯರಾಗಿದ್ದಾರೆ. 12,00 ನಕ್ಸಲರ ಪೈಕಿ 400 ಜನರ ಬಳಿ ಮಾತ್ರ ಶಸ್ತ್ರಾಸ್ತ್ರಗಳಿವೆ. ಉಳಿದವರು ಸಪೋರ್ಟ್ ಸಿಸ್ಟ್ಂನಂತೆ ತೆರೆಯ ಹಿಂದೆ ಕಾರ್ಯನಿರ್ವಹಿಸುತ್ತಿದ್ದಾರೆ. ಐದು ವರ್ಷಗಳ ಮುಂಚೆ ಶಸ್ತ್ರಾಸ್ತ್ರ ಹೊಂದಿದ್ದ ನಕ್ಸಲರ ಸಂಖ್ಯೆ 4 ಸಾವಿರ ಆಗಿತ್ತು. ಒಟ್ಟು ನಕ್ಸಲರ ಸಂಖ್ಯೆ 12 ಸಾವಿರದಷ್ಟಿತ್ತು. ನಕ್ಸಲ್​ಬಾಧಿತ ಛತ್ತೀಸ್​ಗಢದಲ್ಲಿ ಪ್ರಸ್ತುತ ಈಗಲೂ 200 ನಕ್ಸಲರು ಸಕ್ರಿಯರಾಗಿದ್ದಾರೆ. ಇದಲ್ಲದೆ, ಜಾರ್ಖಂಡ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ 150-200 ನಕ್ಸಲರು ಸಕ್ರಿಯರಾಗಿದ್ದಾರೆ. ಸಿಪಿಐ (ಎಂ) ನಕ್ಸಲಿಯರ ಅತಿ ದೊಡ್ಡ ಸಂಘಟನೆ. ಇದಲ್ಲದೆ 17 ದೊಡ್ಡ-ಸಣ್ಣ ನಕ್ಸಲ್ ಸಂಘಟನೆಗಳಿವೆ. ಈ ಹಿಂದೆಲ್ಲ ಒಂದು ನಕ್ಸಲ್ ಸಂಘಟನೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದರೆ, ಅದಕ್ಕೆ ಪ್ರತಿಯಾಗಿ ಮತ್ತೊಂದು ಸಂಘಟನೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net