ಸಮಗ್ರತೆಯತ್ತ ದಿಟ್ಟ ಹೆಜ್ಜೆ ಸಮಾಜದ ಹಿತಕ್ಕೆ ಪೂರಕ

Editorial
Published on

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಕುರಿತ ಚರ್ಚೆ ಹಲವು ದಶಕಗಳಿಂದ ನಡೆಯುತ್ತಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಸಂವಿಧಾನ ರಚನೆ ಸಂದರ್ಭದ ಚರ್ಚೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆ ಬಗ್ಗೆ ಮಾತನಾಡಿದ್ದರು ಎಂಬುದು ಗಮನಾರ್ಹ. ದೇಶದಲ್ಲಿ ಯುಸಿಸಿಯ ಅಗತ್ಯವಿದ್ದು, ಇದನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಶಾಬಾನೋ ಪ್ರಕರಣದ ಸಂದರ್ಭದಲ್ಲಿ ಸರ್ಕಾರಗಳಿಗೆ ಸೂಚಿಸಿತ್ತು.

1995ರಲ್ಲಿ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಈ ಬಗ್ಗೆ ಮಾತನಾಡಿ, ‘44ನೇ ವಿಧಿಗೆ (ಏಕರೂಪ ನಾಗರಿಕ ಸಂಹಿತೆ) ತಿದ್ದುಪಡಿ ತಂದು, ದೇಶದ ಸಮಸ್ತ ನಾಗರಿಕರಿಗೆ ಒಂದೇ ಕಾನೂನು ಜಾರಿಗೆ ತರಲು ಸಾಧ್ಯವಾಗದಿರುವುದು ವಿಷಾದನೀಯ. ಯುಸಿಸಿ ಅನ್ನು ಜಾರಿಗೆ ತರಲು ಸಾಧ್ಯವಾಗದಿರುವುದಕ್ಕೆ ಸರ್ಕಾರಗಳು ನೀಡುತ್ತಿರುವ ಕಾರಣಗಳು ತೀರಾ ಬಾಲಿಶವಾಗಿವೆ. ಮತಬ್ಯಾಂಕ್ ರಾಜಕಾರಣಕ್ಕೆ ಮಣಿದು, ರಾಷ್ಟ್ರದ ಸಮಗ್ರತೆಗೆ ಧಕ್ಕೆ ತಂದಿರುವುದು ವಿಷಾದನೀಯ’ ಎಂದಿತ್ತು.

ವಿವಿಧ ಧರ್ಮ, ಸಮುದಾಯಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವೈಯಕ್ತಿಕ ಕಾನೂನುಗಳಿವೆ. ಅಸಮಾನತೆಗೆ ಕಾರಣವಾಗುವ ಅಂಶಗಳನ್ನು ತೆಗೆದುಹಾಕಿ, ಸರ್ವರಿಗೂ ಸಮಾನ ಹಕ್ಕು ಕಲ್ಪಿಸುವುದು ಯುಸಿಸಿಯ ಉದ್ದೇಶವಾಗಿದ್ದರೂ; ಇದಕ್ಕೆ ರಾಜಕೀಯ ಬಣ್ಣ ಲೇಪಿಸಿದ್ದರಿಂದ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಲೇ ಬಂದಿದೆ. ‘ಕುಟುಂಬದ ಒಬ್ಬ ಸದಸ್ಯನಿಗೆ ಒಂದು ನಿಯಮ, ಇನ್ನೊಬ್ಬ ಸದಸ್ಯನಿಗೆ ಮತ್ತೊಂದು ನಿಯಮ ಇರುವ ಪದ್ಧತಿ ಜಾರಿಯಲ್ಲಿದ್ದರೆ ಅಂಥ ಕುಟುಂಬವು ನೆಮ್ಮದಿ, ಶಾಂತಿಯಿಂದ ಬದುಕಲು ಸಾಧ್ಯವೇ? ಹಾಗಾಗಿಯೇ ಭಾರತದಂಥ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಕಾನೂನು, ನಾಗರಿಕ ಸಂಹಿತೆ ಜಾರಿಯಾಗಬೇಕಿರುವುದು ಸಂವಿಧಾನದಲ್ಲಿಯೇ ಸೂಚಿತಗೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಯುಸಿಸಿ ಅಗತ್ಯದ ಬಗ್ಗೆ ಹೇಳಿದ್ದರು.

ದೇಶಾದ್ಯಂತ ಯುಸಿಸಿ ಜಾರಿ ಇನ್ನೂ ಸವಾಲಾಗಿ ಉಳಿದಿದ್ದರೂ, ಉತ್ತರಾಖಂಡ ಈ ನಿಟ್ಟಿನಲ್ಲಿ ಬಲವಾದ ಹೆಜ್ಜೆ ಇರಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮೊದಲೇ ಘೋಷಿಸಿದಂತೆ ಮಂಗಳವಾರ (ಫೆ.6) ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಧೇಯಕ ಮಂಡನೆಯಾಗಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ, ಲಿವ್ ಇನ್ ರಿಲೇಶನ್​ಶಿಪ್ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಮಸೂದೆ ಇದಾಗಿದ್ದು, ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳಿಗೆ ತಿಲಾಂಜಲಿ ನೀಡುವ ವಿಧೇಯಕವಾಗಿದೆ. ಭಾರತದ ಸಂವಿಧಾನದ ಮೂಲ ಆಶಯವೇ ಸಮಾನತೆ. ಧಾರ್ವಿುಕ ಕಾರಣಗಳಿಗಾಗಿ ಮತ್ತು ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಸಮಾನತೆಯ ಮೌಲ್ಯ ಬಲಿಯಾಗಬಾರದು. ಫೆಬ್ರವರಿ 4ರಂದು ಉತ್ತರಾಖಂಡ ಸಚಿವ ಸಂಪುಟ ಸಭೆ ಮಸೂದೆ ಮಂಡನೆಗೆ ಒಪ್ಪಿಗೆ ನೀಡಿತ್ತು. ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯು ಫೆ. 2ರಂದು ಮುಖ್ಯಮಂತ್ರಿ ಧಾಮಿ ಅವರಿಗೆ ವರದಿ ಸಲ್ಲಿಸಿತ್ತು. ಕೆಲ ವರ್ಗಗಳಿಂದ ಯುಸಿಸಿಗೆ ವಿರೋಧ ವ್ಯಕ್ತವಾಗಬಹುದಾದರೂ, ಅಂತಿಮವಾಗಿ ಸಮಾಜದ ಹಿತರಕ್ಷಣೆ ನಿಟ್ಟಿನಲ್ಲಿ ಈ ಕ್ರಮ ಪೂರಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net