

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಬಾಲಕಿ ಮೃತಪಟ್ಟು, ಈಕೆಯ ತಂದೆ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಗುಬ್ಬಲಾಳ ನಿವಾಸಿ ಎಂ.ಎಸ್.ಪ್ರಸನ್ನ ದಂಪತಿ ಪುತ್ರಿ ಎಂ.ಪಿ.ಪೂರ್ವರಾವ್ (4.5) ಮೃತ ಬಾಲಕಿ. ತಂದೆಯ ಬೈಕ್‌ನಲ್ಲಿ ಶಾಲೆಗೆ ಬಾಲಕಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಬಿಎಂಟಿಸಿ ಬಸ್ ಚಾಲಕ ಬಸವರಾಜ್ ಪೂಜಾರಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ಪ್ರಸನ್ನ, ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ತಮ್ಮ ಕುಟುಂಬದ ಜತೆ ಗುಬ್ಬಲಾಳದಲ್ಲಿ ಪ್ರಸನ್ನ ನೆಲೆಸಿದ್ದಾರೆ. ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಪುತ್ರಿಯನ್ನು ಪ್ರಿ-ಕೆಜಿಗೆ ಸೇರಿಸಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ಮಗಳನ್ನು ಶಾಲೆಗೆ ಬಿಡಲು ಪ್ರಸನ್ನ ಬೈಕ್‌ನಲ್ಲಿ ತೆರಳುತ್ತಿದ್ದರು.
ಉತ್ತರಹಳ್ಳಿ ಸರ್ಕಲ್ ಕಡೆಯಿಂದ ವಸಂತಪುರಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಬೈಕ್‌ಗೆ ಗುದ್ದಿದ್ದ ಪರಿಣಾಮ ಪೂರ್ವಾ ಕೆಳಗೆ ಬಿದ್ದಿದ್ದಾಳೆ. ಬಸ್ಸಿನ ಚಕ್ರಗಳು ಬಾಲಕಿ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಮಾರಸ್ವಾಮಿಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.