

ವಿಜಯಪುರ: ಭೀಮಾತೀರದ ಶಿವಯೋಗಪ್ಪ ನೇದಲಗಿ ಬಿಜೆಪಿ ಸೇರ್ಪಡೆ ಭರಾಟೆ ಜೋರಾಗಿದೆ. ಶುಕ್ರವಾರ ವಿಜಯಪುರದ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ನೇತೃತ್ವದಲ್ಲಿ ಶಿವಯೋಗಪ್ಪ ನೇದಲಗಿ ಬಿಜೆಪಿ ಸೇರ್ಪಡೆಯಾರು.
ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಇಂಡಿಯಿಂದ ನೂರಾರು ಕ್ರೂಸರ್‌ಗಳಲ್ಲಿ ಸಾವಿರಾರು ಜನ ಆಗಮಿಸಿದರು. ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾಲು ಸಾಲು ಕ್ರೂಸರ್‌ಗಳಿಂದಾಗಿ ದಟ್ಟಣೆ ಉಂಟಾಯಿತು. ಇದೇ ವೇಳೆ ಅಗ್ನಿಶಾಮಕ ವಾಹನವೊಂದು ಆಗಮಿಸಿದ್ದು ಸಂಚಾರ ಸುಗಮಗೊಳಿಸುವುದು ದುಸ್ತರವಾಯಿತು. ಸುಮಾರು 20 ನಿಮಿಷ ಅಗ್ನಿಶಾಮಕ ವಾಹನ ಸೈರನ್ ಹಚ್ಚಿಕೊಂಡೇ ನಿಲ್ಲಬೇಕಾಯಿತು. ಇಂಡಿ ತಾಲೂಕಿನ ಪ್ರತೀ ಹಳ್ಳಿಯಿಂದ ಕ್ರೂಸರ್‌ಗಳು ವಿಜಯಪುರದತ್ತ ಹೊರಟಿದ್ದರಿಂದ ವಾಹನ ದಟ್ಟಣೆ ಹೆಚ್ಚಾಯಿತು. ಅಗ್ನಿಶಾಮಕ ವಾಹನಕ್ಕೆ ಸುಗಮ ಸಂಚಾರ ವ್ಯವಸ್ಥೆ ಸಿಗದಿರುವುದು ಒಂದು ಭಾಗವಾದರೆ ಶಿವಯೋಗಪ್ಪ ನೇದಲಗಿ ಬಿಜೆಪಿ ಸೇರ್ಪಡೆ ಅಬ್ಬರಕ್ಕೆ ಈ ದಟ್ಟಣೆ ಸಾಕ್ಷಿಯಾಗಿದ್ದು ಇನ್ನೊಂದು ಭಾಗ ಎಂದು ಸ್ಥಳೀಯರು ಅಭಿಪ್ರಾಯಿಸಿದರು.
ಶಿವಯೋಗಪ್ಪ ನೇದಲಗಿ ಅಭಿಮಾನಿಗಳು ಹಾಗೂ ಬೆಂಬಲಿಗರು ಹಲಗೆ, ಚಿಟ್ಟಹಲಿಗೆ ಮಜಲು, ಕಹಳೆ ಮತ್ತಿತರ ವಾದ್ಯಗಳೊಂದಿಗೆ ಜೈಕಾರ ಹಾಕಿಕೊಂಡು ಪ್ರಯಾಣ ಬೆಳೆಸಿದ್ದು ಗಮನ ಸೆಳೆಯಿತು.