

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್ ನಲ್ಲಿ ಭ್ರಷ್ಟಾಚಾರ, ಅಕ್ರಮವಾಗಿರುವ ದಾಖಲೆಗಳಿದ್ದರೆ ಪಕ್ಷದ ರಾಜ್ಯಾಧ್ಯಕ್ಷರ ಮುಂದಿಡಲಿ ಇಲ್ಲವೇ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ತಿರುಗೇಟು ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಹಾಗೂ ಸರ್ಕಾರಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಬಾರದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ ನೀಡಿದ್ದರೂ ಕೆಲವರಿಗೆ ಬಾಯಿ ಚಪಲ. ಅವರು ಮಾತನಾಡುವುದನ್ನು ತಡೆಯಲಾಗದು. ವಿಶ್ವನಾಥ್ ನಿನ್ನೆ ನೀಡಿದ ಹೇಳಿಕೆ ಅನುಸಾರ ಶಿಸ್ತು ಕ್ರಮಕ್ಕಾಗಿ ಪಕ್ಷದ ಕೇಂದ್ರ ಸಮಿತಿಗೆ ಶಿಫಾರಸು ಮಾಡಲಾಗಿದ್ದು, ಮಾಧ್ಯಮಗಳಿಗೆ ಇವತ್ರು ನೀಡಿದ ಹೇಳಿಕೆಯನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದರು.
ಭ್ರಷ್ಟಾಚಾರ, ಅಕ್ರಮದ ಸಮರ್ಥನೆ ಅಥವಾ ನಿರಾಕರಣೆ ನಮ್ಮ ಉದ್ದೇಶವಿಲ್ಲ. ದಾಖಲೆಗಳನ್ನು ಪಕ್ಷಕ್ಕೆ ಸಲ್ಲಿಸಲಿ, ಪರಿಶೀಲಿಸಿ ಸೂಕ್ತ ಕ್ರಮವಹಿಸಲಿದೆ. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತರುವ ಹೇಳಿಕೆಗಳನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಅಶ್ವತ್ಥ ನಾರಾಯಣ ಗೌಡ ಎಚ್ಚರಿಸಿದರು.