ನನಗೆ ರಾಜಕೀಯ ಶತ್ರುಗಳಿದ್ದಾರೆ... 2 ತಿಂಗಳು ಜೈಲುಶಿಕ್ಷೆಗೆ ಗುರಿಯಾದ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ ಹೇಳಿಕೆ

BJP MLA Uday Garudachar
Published on

ಬೆಂಗಳೂರು: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ 2 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್​, ನನಗೆ ರಾಜಕೀಯ ಶತ್ರುಗಳಿದ್ದಾರೆ ಎಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ 10 ಸಾವಿರ ರೂ. ದಂಡ ಹಾಗೂ 2 ತಿಂಗಳು ಜೈಲು ಶಿಕ್ಷೆ ‌ವಿಧಿಸಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಇಂದು (ಗುರುವಾರ) ತೀರ್ಪು ಪ್ರಕಟಿಸಿದೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕರು, ಚುನಾವಣೆ ಸಮಯದಲ್ಲಿ ಅಫಿಡವಿಟ್ ಹಾಕಿದಾಗ ವಕೀಲರು ಹೇಳಿದ್ದ ಹಾಗೆ ಕೇಳಿದ್ದಾನೆ. ಶ್ರೀಮತಿ ಅಕೌಂಟ್​ನಲ್ಲಿ ಎಷ್ಟು ಹಣ ಇತ್ತೋ ಅಷ್ಟನ್ನೇ ಹೇಳಿದ್ದೇನೆ. ಜಮೀನು ವಿಚಾರವಾಗಿ ಕೆಲ ಕೇಸ್​ಗಳಿವೆ. ಬಿಜಿನೆಸ್​ ಮೆನ್ ಆದ ಕಾರಣ ಕೇಸ್​ ದಾಖಲಿಸಿದ್ದಾರೆ. ಈಗ ತೀರ್ಪು ಬಂದಿದೆ. ಎರಡು ತಿಂಗಳು ಜೈಲು ಅಂತಾ ಹೇಳಿದೆ. ಒಂದು ತಿಂಗಳು ಕಾಲಾವಕಾಶ ಇದೆ. ಮೇಲ್ಮನವಿ ಸಲ್ಲಿಸುತ್ತೇನೆ. ರಾಜಕೀಯವಾಗಿ ನನಗೆ ಶತ್ರುಗಳಿದ್ದಾರೆ ಎಂದರು.

2 ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ ವಿರುದ್ಧ ಸೋದರ ಸಂಬಂಧಿ ಎಚ್.ಜಿ.ಪ್ರಶಾಂತ್ ಎಂಬುವರು 2019ರ ಅಕ್ಟೋಬರ್​ನಲ್ಲಿ ಜೆಪಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜನಪ್ರತಿನಿಧಿಗಳ ಕಾಯ್ದೆ ಸೆ.125 ಎ ಅಡಿ ಆರೋಪ ಸಾಬೀತಾಗಿದ್ದು, ಶಾಸಕರಿಗೆ ಶಿಕ್ಷೆ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net