

ಶಿವಮೊಗ್ಗ: ಮದುವೆ ಗಂಡು ಆಗೋಕೆ ನಾನು ರೆಡಿ ಇದ್ದೇನೆ, ಮದ್ವೆ ಯಾವಾಗ ಮಾಡ್ತಾರೆ ಅನ್ನೋದನ್ನ ನೀನೇ ಅವರನ್ನು ಕೇಳಬೇಕು... ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ದರರು. ಇದೀಗ ಈ ಪ್ರಕರಣದಲ್ಲಿ ನಿದೋರ್ಷಿಯಾಗಿ ಹೊರಬಂದಿರುವ ಕೆ.ಎಸ್. ಈಶ್ವರಪ್ಪ ಮತ್ತೆ ಮಂತ್ರಿಗಿರಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಈ ಕುರಿತು ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಮದುವೆ ಗಂಡು ಆಗೋಕೆ ನಾನು ಸಿದ್ಧ, ಮದ್ವೆ ಯಾವಾಗ ಮಾಡ್ತಾರೆ ಅನ್ನೋದನ್ನ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಅವರನ್ನು ನೀವೇ ಕೇಳ್ಬೇಕು... ಎಂದರು.
ಆರೋಪ ಮುಕ್ತರಾದ ಬಳಿಕ ಮತ್ತೆ ಸಚಿವ ಸ್ಥಾನ ನೀಡುವುದಾಗಿ ಬಸವರಾಜ ಬೊಮ್ಮಾಯಿ, ನಳಿನ್ಕುಮಾರ್ ಕಟೀಲ್, ಯಡಿಯೂರಪ್ಪ ಅವರು ನನಗೆ ಭರವಸೆ ನೀಡಿದ್ದರು. ಆರೋಪದಿಂದ ಮುಕ್ತನಾಗಿದ್ದೇನೆ. ಹಾಗಾಗಿ ಯಾವಾಗ ಮಂತ್ರಿ ಮಾಡ್ತೀರಿ ಎಂದು ನೀವೆ ಅವರನ್ನೇ ಕೇಳಿ, ನನ್ನನ್ನು ಯಾಕೆ ಕೇಳ್ತೀರಾ? ಎಂದು ಸುದ್ದಿಗಾರಿಗೆ ಹೇಳಿದರು.
ಬೇರೆಯವರ ಪ್ರಕರಣಕ್ಕೂ ನನ್ನ ಪ್ರಕರಣಕ್ಕೂ ವ್ಯತ್ಯಾಸ ಇದೆ. ಬೇರೆಯವರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ನನಗೆ ಸಚಿವ ಸ್ಥಾನ ನೀಡಲಿಲ್ಲವೆಂದು ಪಕ್ಷ ಸಂಘಟನೆಗೂ ತೊಂದರೆ ನೀಡುವುದಿಲ್ಲ. ಸಂಘಟನೆ ವಿಷಯದಲ್ಲಿ ನಾನೊಬ್ಬನೇ ಎಲ್ಲವನ್ನೂ ಮಾಡಲೂ ಸಾಧ್ಯವಿಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.