

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಆಯಿತು, ಸುರಂಗ ಮಾರ್ಗದ ನಂತರ ಗ್ರೇಟರ್ ಬೆಂಗಳೂರು ಬಗ್ಗೆ ಹೇಳುತ್ತಿದ್ದಾರೆ. ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ, ಸುರಕ್ಷಿತ-ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ, ಅವೈಜ್ಞಾನಿಕ ಸುರಂಗ ಯೋಜನೆ ಕೈಬಿಡಿ ಎಂದು ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ.
ರಾಜಧಾನಿ ಜನರ ನಿರೀಕ್ಷೆ, ಭವಿಷ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 2025-26ನೇ ಸಾಲಿನ ಮುಂಗಡಪತ್ರದಲ್ಲಿ ಬೆಂಗಳೂರು ಮಹಾನಗರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಮನವಿ ಮಾಡಲು ಫೆ.28ಕ್ಕೆ ಸಿಎಂ ಸಿದ್ದರಾಮಯ್ಯಗೆ ಪಕ್ಷದ ನಿಯೋಗ ಭೇಟಿಯಾಗಲಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಮಂಗಳವಾರ ಪಕ್ಷದ ಸಂಸದ, ಶಾಸಕರು ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ವಿಷಯ ತಿಳಿಸಿದರು.
ಪ್ರಮುಖವಾಗಿ ಮೂರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ, ಸರ್ಕಾರಕ್ಕೆ ಒತ್ತಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮೆಟ್ರೋ ಪ್ರಯಾಣ ದರ ಹೆಚ್ಚಳ ಹಿಂಪಡೆದು, ಬೆಂಗಳೂರು ಜನರ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು. ರಾಜ್ಯ ಸರ್ಕಾರದ ಕೋರಿಕೆಯಂತೆ ಮೆಟ್ರೋ ದರ ಹೆಚ್ಚಿಸಿದ್ದು, ಅದರಂತೆಯೇ ದರ ಇಳಿಸಲು ಒತ್ತಡ ತರಬೇಕು ಎಂದರು.
ಬೆಂಗಳೂರಿನ ವಾಹನಗಳ ಸಂಚಾರ ದಟ್ಟಣೆ ಸಮರ್ಪಕವಾಗಿ ನಿರ್ವಹಿಸಲು ಅವೈಜ್ಞಾನಿಕ ಸುರಂಗ ಯೋಜನೆ ಅನಗತ್ಯ. ಸಾಕಷ್ಟು ಪರ್ಯಾಯ ಮಾರ್ಗೋಪಾಯಗಳಿದ್ದು, ಅದರತ್ತ ಸರ್ಕಾರ ಆದ್ಯತೆ ನೀಡಿ ಸೂಕ್ತ ಯೋಜನೆ ರೂಪಿಸಿ ಜಾರಿಗೊಳಿಸಬೇಕು.
ರಸ್ತೆ ಗುಂಡಿ ಮುಚ್ಚಲಾಗದವರು ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಟೀಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸರಾಗ ಸಂಚಾರಕ್ಕೆ ಬೇಕಾದ ವ್ಯವಸ್ಥೆ ಮೊದಲು ಮಾಡಿ, ಸುರಂಗ ಯೋಜನೆ ಕೈಬಿಡಿ ಎಂದು ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.
ಬಿಬಿಎಂಪಿ ಚುನಾವಣೆಗೆ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಮತ್ತಷ್ಟು ಮುಂದೂಡುವುದು ಸರಿಯಾದ ಕ್ರಮವಲ್ಲ. ಗ್ರೇಟರ್ ಬೆಂಗಳೂರು ವಿಷಯ ಪ್ರಸ್ತಾಪದ ಹಿಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ಷಡ್ಯಂತ್ರದಂತೆ ಕಂಡು ಬರುತ್ತಿದ್ದು, ಮೊದಲು ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.