

Raj Tarun Case: ಕಳೆದ ವರ್ಷ ತನ್ನ ಪ್ರೇಯಸಿ ಲಾವಣ್ಯ ಕೊಟ್ಟ ದೂರಿನಿಂದ ದೊಡ್ಡ ಮಟ್ಟದ ವಿವಾದಕ್ಕೆ ಗುರಿಯಾಗಿದ್ದ ಟಾಲಿವುಡ್ ಯುವ ನಟ ರಾಜ್ ತರುಣ್, ಲಾವಣ್ಯಾಳನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ, ಮದುವೆಯಾಗುವುದಾಗಿ ಭರವಸೆ ಕೊಟ್ಟು ವಂಚಿಸಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಎಂದು ಲಾವಣ್ಯ ಗಂಭೀರ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ತೀರ ಮನನೊಂದ ಲಾವಣ್ಯ, ಪ್ರಿಯಕರ ರಾಜ್ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಇಂದಿನವರೆಗೂ ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಮಸ್ತನ್ ಸಾಯಿ ಅರೆಸ್ಟ್ ಆಗಿದ್ದಾನೆ.
ತನ್ನ ವಿರುದ್ಧ ಲಾವಣ್ಯ ಮಾಡಿದ ಆರೋಪಗಳೆಲ್ಲವೂ ಸುಳ್ಳು. ಈ ಪ್ರಕರಣವನ್ನು ನಾನು ಕೋರ್ಟ್ನಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದ ರಾಜ್ ತರುಣ್, ಅವಳನ್ನು ಪ್ರೀತಿಸಿದ್ದು ನಿಜ. ಆದರೆ ಅವಳು ಮಾದಕ ವ್ಯಸನಿಯಾದ ಕಾರಣ ಆಕೆಯನ್ನು ಬಿಟ್ಟು ದೂರವಿದ್ದೇನೆ ಎಂದು ಹೇಳಿದ್ದರು. ಲಾವಣ್ಯಳನ್ನು ಈ ಹಿಂದೆ ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿ, ನಂತರದಲ್ಲಿ ಬಿಡುಗಡೆ ಮಾಡಲಾಗಿತ್ತು. ರಾಜ್ ತರುಣ್ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ ಕೆಲವು ದಿನಗಳ ನಂತರ, ಮಸ್ತಾನ್ ಸಾಯಿ ಎಂಬ ವ್ಯಕ್ತಿಯಿಂದ ನಾವು ದೂರವಾಗಿದ್ದೇವೆ ಎಂದು ಲಾವಣ್ಯ ನೀಡಿದ್ದ ದೂರಿನ ಮೇರೆಗೆ ತನಿಖೆಯನ್ನು ಮತ್ತೊಂದು ದಿಕ್ಕಿನಲ್ಲಿ ನಡೆಸಿದ ಪೊಲೀಸರಿಗೆ ಈಗ ಮಸ್ತಾನ್ ಸಾಯಿ ಅಸಲಿ ಮುಖ ಬಯಲಾಗಿದೆ.
ಆರೋಪಿ ಮಸ್ತಾನ್ ಈ ಹಿಂದೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡಿರುವ ಬಗ್ಗೆ ಗಂಭೀರ ಆರೋಪವಿದೆ. ದೆಹಲಿ ಮತ್ತು ಗೋವಾದಿಂದ ಮಾದಕ ದ್ರವ್ಯಗಳನ್ನು ತಂದು ತೆಲುಗು ರಾಜ್ಯಗಳ ಹಲವು ಭಾಗಗಳಿಗೆ ಸರಬರಾಜು ಮಾಡಿದ್ದಾನೆ ಎಂದು ವರದಿಯಾಗಿದೆ. ಹಿಂದೊಮ್ಮೆ ಆತನನ್ನು ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಇತ್ತೀಚೆಗೆ, ಲಾವಣ್ಯ-ರಾಜ್ ತರುಣ್ ಪ್ರಕರಣದಲ್ಲಿ ಮಸ್ತಾನ್ ಸಾಯಿನನ್ನು ನರಸಿಂಗಿ ಪೊಲೀಸರು ಬಂಧಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಲಾವಣ್ಯ ದೂರಿನ ಆಧಾರದ ಮೇರೆಗೆ ಮಸ್ತಾನ್ ಸಾಯಿನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಜ್ ತರುಣ್ ತನ್ನೊಂದಿಗೆ ಸಂಬಂಧ ಕಡಿದುಕೊಳ್ಳಲು ಮಸ್ತಾನ್ ಸಾಯಿ ಕಾರಣ ಎಂದು ಲಾವಣ್ಯ ತಮ್ಮ ದೂರಿನಲ್ಲಿ ತಿಳಿಸಿದ್ದರು. ನನ್ನ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಆಗಾಗ್ಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಸ್ತಾನ್ ಸಾಯಿ ಹಲವಾರು ಹುಡುಗಿಯರು ಖಾಸಗಿಯಾಗಿದ್ದಾಗ ಅವರೊಂದಿಗೆ ಇರುವ ವೀಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ ಮತ್ತು ಆ ವೀಡಿಯೊಗಳನ್ನು ಮುಂದಿಟ್ಟು ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಲಾವಣ್ಯ ಅವರ ಕೆಲವು ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಮಸ್ತಾನ್ ಸಾಯಿ ಬಳಿಯಿದ್ದ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದ ಪೊಲೀಸರು, ಅದರಲ್ಲಿ 200ಕ್ಕೂ ಹೆಚ್ಚು ಖಾಸಗಿ ವೀಡಿಯೊ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ವಿಷಯ ಮತ್ತೊಮ್ಮೆ ಟಾಲಿವುಡ್ನಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಅಸಲಿಗೆ ಮಸ್ತಾನ್ ಸಾಯಿ ಹೊಂದಿರುವ ಖಾಸಗಿ ವೀಡಿಯೊಗಳು ಯಾರದ್ದು? ಅವುಗಳಲ್ಲಿ ಯಾವ ಸೆಲೆಬ್ರಿಟಿಗಳ ವೀಡಿಯೊಗಳಿವೇ ಎಂಬ ಬಗ್ಗೆ ಅನುಮಾನಗಳು ಭುಗಿಲೆದ್ದಿವೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ತನಗೆ ರಾಜ್ನಿಂದ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಪಣತೊಟ್ಟ ಲಾವಣ್ಯ ಒಂದೆಡೆಯಾದರೆ, ಪೊಲೀಸರು ಕಳಿಸಿರುವ ವಿಚಾರಣಾ ನೋಟಿಸ್ಗೆ ಲಾಯರ್ ಮೂಲಕ ಪ್ರತಿಕ್ರಿಯಿಸಿರುವ ರಾಜ್ ತರುಣ್, ಮೊದಲ ವಿಚಾರಣೆಗೆ ಗೈರಾಗಿದ್ದರು. ಇವರಿಬ್ಬರ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಈಗ ಶಾಕಿಂಗ್ ವಿಚಾರ ಹೊರಬಿದ್ದಿದೆ. ಲಾವಣ್ಯಳ ಖಾಸಗಿ ದೃಶ್ಯ ಚಿತ್ರೀಕರಿಸಿ, ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಆರೋಪಿ ಮಸ್ತಾನ್ ಸಾಯಿನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).