

ಬೆಂಗಳೂರು: ಅಪ್ಪು ಅಗಲಿಕೆಯ ನೋವಿನಲ್ಲೇ ನಟ ಶಿವರಾಜ್ಕುಮಾರ್ ಅವರು ಅಭಿಮಾನಿಗಳೊಂದಿಗೆ ಭಜರಂಗಿ- 2 ಸಿನಿಮಾ ವೀಕ್ಷಿಸಲು ನ.14ರಂದು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.
ಈ ಕುರಿತು ಜಯಣ್ಣ ಪಿಲ್ಮ್ಸ್ ಟ್ವೀಟ್ ಮಾಡಿದ್ದು, ಅಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರಿನ ಗಾಂಧಿನಗರದ ಅನುಪಮಾ ಚಿತ್ರಮಂದಿಕ್ಕೆ ಬರುವ ಶಿವಣ್ಣ, ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಲಿದ್ದಾರೆ ಎಂದು ತಿಳಿಸಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಭಜರಂಗಿ- 2 ಸಿನಿಮಾ ರಾಜ್ಯಾದ್ಯಂತ ತೆರೆ ಕಂಡ ದಿನವೇ(ಅ.29) ನಟ ಪುನೀತ್ ರಾಜ್ಕುಮಾರ್ ಅವರು ನಿಧರನಾದರು. ಅಪ್ಪು ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಭಜರಂಗಿ ಸಿನಿಮಾ ಸೇರಿದಂತೆ ಎಲ್ಲ ಸಿನಿಮಾಗಳ ಪ್ರದರ್ಶನವೂ ರದ್ದಾಗಿತ್ತು. ಪುನೀತ್ರ ಅಂತ್ಯಕ್ರಿಯೆ ಮುಗಿದ ಬಳಿಕ ಮತ್ತೆ ಭಜರಂಗಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಇತ್ತೀಚಿಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಿವಣ್ಣ, ನೋವಿನಲ್ಲೂ ಅಭಿಮಾನಿಗಳು ಭಜರಂಗಿ-2 ಸಿನಿಮಾ ನೋಡುತ್ತಿದ್ದಾರೆ. ಈ ಕಷ್ಟದ ಸಮಯದಲ್ಲೂ ಚಿತ್ರ ನೋಡಿ ನಮ್ಮ ಜತೆ ಅಭಿಮಾನಿಗಳು ನಿಂತಿದ್ದಾರೆ. ಅವರ ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದಗಳು ಎಂದಿದ್ದರು.