

ಹೊಳೆಹೊನ್ನೂರು: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕದಲ್ಲಿ ತೀವ್ರ ಅಡಚಣೆಯಾದರೆ ಸಾರ್ವಜನಿಕರು ಮೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ರುಬ್ಬುವುದು ಮಾಮೂಲಿ. ಆದರೆ, ಇಲ್ಲೊಬ್ಬ ಭೂಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯುತ್ ವಿತರಣಾ ಕೇಂದ್ರದಲ್ಲೇ ನಿತ್ಯ ಮನೆಗೆ ಬೇಕಾದ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾನೆ. ಅಷ್ಟೇ ಅಲ್ಲ, ತನ್ನ ಮನೆಯ ಎರಡ್ಮೂರು ಮೊಬೈಲ್‌ಗಳನ್ನೂ ಅಲ್ಲೇ ಚಾರ್ಚ್ ಮಾಡಿಕೊಳ್ಳುತ್ತಾನೆ!
ಇಂಥದ್ದೊಂದು ಘಟನೆ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದಲ್ಲಿ ನಡೆಯುತ್ತಿದೆ. ಗ್ರಾಮದ ಹನುಮಂತಪ್ಪ ಎಂಬಾತ ಈ ಕೆಲಸ ಮಾಡುತ್ತಿದ್ದಾರೆ. ಮನೆಗೆ ಸಮಪರ್ಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಬೇಸತ್ತ ಈತ, ಹತ್ತಾರು ತಿಂಗಳಿನಿಂದ ಮೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರಕ್ಕೇ ನಿತ್ಯ ಮಿಕ್ಸಿ ತೆಗೆದುಕೊಂಡು ಹೋಗಿ ಅಡುಗೆಗೆ ಬೇಕಾದ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ಮೆಸ್ಕಾಂ ಅಧಿಕಾರಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟಲ್ಲಾ ನಡೆಯುತ್ತಿದ್ದರೂ ಮೆಸ್ಕಾಂ ಅಧಿಕಾರಿ ಮಾತ್ರ ಸುಮ್ಮನಿದ್ದಾರೆ. ಯಾಕಂದ್ರೆ ಅಧಿಕಾರಿಯು ಬಾಯಿತಪ್ಪಿ ಆ ಒಂದು ಮಾತು ಆಡಿದ್ದೇ ಇಷ್ಟಕ್ಕೆಲ್ಲ ಕಾರಣ. ಆ ಮಾತನ್ನು ಉಗುಳುವಂತಿಲ್ಲ, ನುಂಗುವಂತಿಲ್ಲ....
ಮಾರಿಗುಡಿ ಹನುಮಂತಪ್ಪ ಎಂಬುವರು ಮಂಗೋಟೆಯಲ್ಲಿ ಮನೆ ನಿರ್ಮಿಸಿದ್ದಾರೆ. ಈ ಮನೆಗೆ ಸಮರ್ಪಕ ವಿದ್ಯುತ್ ವಿತರಣೆ ಮಾಡುವಂತೆ ಆಗ್ರಹಿಸಿ ಮೆಸ್ಕಾಂ ಅಧಿಕಾರಿಗಳು, ಶಾಸಕರು, ಸಂಸದರನ್ನು ಭೇಟಿ ಮಾಡಿ ಹಲವು ಬಾರಿ ಮನವಿ ಮಾಡಿದ್ದರೂ ಯಾರೊಬ್ಬರೂ ಸ್ಪಂದಿಸಿಲ್ಲ. ಕೊನೆಗೆ ಹನುಮಂತಪ್ಪ ಮಂಗೋಟೆಯಿಂದ ಮಲ್ಲಾಪುರದ ವಿತರಣಾ ಕೇಂದ್ರಕ್ಕೆ ಬಂದು ಮನೆಗೆ ಬೇಕಾದ ಮಸಾಲೆಯನ್ನು ರುಬ್ಬಿಕೊಂಡು ಮೂರ್ನಾಲ್ಕು ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಿ ಬ್ಯಾಟರಿ ಫುಲ್ ಮಾಡಿಕೊಂಡು ಹೋಗುತ್ತಿದ್ದಾರೆ. ಹತ್ತಾರು ತಿಂಗಳಿಂದ ಈತ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬಂದು ಮಿಕ್ಸಿ ಹಾಕಿಕೊಂಡು ಹೋಗುತ್ತಿದ್ದರೂ ಯಾವೊಬ್ಬ ಸಿಬ್ಬಂದಿಯೂ ಹನುಮಂತನನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಮೇಲಧಿಕಾರಿಗಳಿಗೂ ದೂರು ನೀಡಿಲ್ಲ.
ಮಂಗೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹನುಮಂತಪ್ಪ ಅವರ ಮನೆ ಮೆಸ್ಕಾಂ ಕಚೇರಿಯ ಕೂಗಳೆತೆ ದೂರದಲ್ಲಿದೆ. ಹನುಮಂತಪ್ಪ ಮನೆಗೆ ಅಧಿಕಾರಿಗಳು ವಿದ್ಯುತ್ ಲೈನ್ ಹಾಕಿ ಮೀಟರ್ ಕೂಡ ಅಳವಡಿಸಿದ್ದಾರೆ. ಆದರೆ ದಿನದಲ್ಲಿ 4 ಗಂಟೆಯೂ ವಿದ್ಯುತ್ ಇರುವುದಿಲ್ಲ. ಒಂದೆರಡು ತಿಂಗಳು ಅಕ್ಕಪಕ್ಕದ ಮನೆಗಳಲ್ಲಿ ಮಿಕ್ಸಿ ಹಾಕಿಕೊಂಡು, ಮೊಬೈಲ್ ಚಾರ್ಜ್ ಮಾಡಿಕೊಂಡು ರೋಸಿ ಹೋದ ಹನುಮಂತಪ್ಪ ಮೆಸ್ಕಾಂ ಇಂಜಿನಿಯರ್‌ಗೆ ತರಾಟೆ ತೆಗೆದುಕೊಂಡಾಗ ಮಾತಿನ ಭರದಲ್ಲಿ ಅಧಿಕಾರಿ ಬಾಯ್ತಪ್ಪಿ ಮನೆಯಲ್ಲಿ ಕರೆಂಟ್ ಇಲ್ಲ ಅಂದ್ರೆ ಕೆಇಬಿ ಕಚೇರಿಗೆ ಮಿಕ್ಸಿ ತಂದು ಮಸಾಲೆ ರುಬ್ಬಿಕೊಂಡು ಹೋಗು ಎಂದಿದ್ದರು. ಅಂದಿನಿಂದ ಹನುಮಂತಪ್ಪ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಆದರೂ ಹನುಮಂತಪ್ಪರ ಮನೆಯ ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ಇತ್ತ ಹನುಮಂತಪ್ಪರೂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಸಾಲೆ ಅರೆಯುವುದನ್ನು ನಿಲ್ಲಿಸಿಲ್ಲ.
ಮಳೆಯಿಂದ ಐಪಿ ಸೆಟ್‌ಗಳನ್ನು ಚಾರ್ಜ್ ಮಾಡುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ. ತಾತ್ಕಾಲಿಕವಾಗಿ ಮಲ್ಲಾಪುರದ ವಿತರಣಾ ಕೇಂದ್ರದಿಂದಲೇ ನಿರಂತರ ಜ್ಯೋತಿ ವೈಯರ್ ಅಳವಡಿಸಿಕೊಳ್ಳಬಹುದು. ಇನ್ನೊಂದು ತಿಂಗಳೊಳಗೆ ನಿರಂತರವಾಗಿ ವಿದ್ಯುತ್ ಹರಿಸಲು ಕ್ರಮ ಕೈಗೊಳುವುದು.
|ವಿಶ್ವನಾಥ್ ಆನವೇರಿ ಮೆಸ್ಕಾಂ ಜೆಇ