

ಚಿಕ್ಕಬಳ್ಳಾಪುರ: ಇಲ್ಲೊಬ್ಬ ಕಾಮುಕ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಇಂತಹ ಪೈಶಾಚಿಕ ಕೃತ್ಯ ಚಿಕ್ಕಬಳ್ಳಾಪುರ ನಗರಸಭೆ ಸಂಕೀರ್ಣದ ಮೀನು-ಮಾಂಸ ಮಾರಾಟ ಮಳಿಗೆ ಬಳಿ ಗುರುವಾರ ರಾತ್ರಿ 10.45 ಸಮಯದಲ್ಲಿ ಸಂಭವಿಸಿದೆ.
ಅಬ್ದುಲ್ಲಾ ಆರೋಪಿ. ಈತ ತಳ್ಳೋ ಗಾಡಿಯಲ್ಲಿ ಚಕ್ಕೆ ಲವಂಗ, ಹರಿಶಿಣ-ಕುಂಕಮ, ಮಸಾಲೆ ಪದಾರ್ಥ ಮಾರಾಟ ಮಾಡುತ್ತಿದ್ದ. ಸುಮಾರು 40 ವರ್ಷದ ಮಹಿಳೆಯೊಬ್ಬರು ನಗರದಲ್ಲಿ ಭಿಕ್ಷೆ ಬೇಡಿಕೊಂಡಿದ್ದರು. ಮೀನು-ಮಾಂಸ ಮಾರಾಟ ಮಳಿಗೆ ಬಳಿಯೇ ಮಲಗುತ್ತಿದ್ದರು. ಇದನ್ನು ಗಮನಿಸಿದ್ದ ಅಬ್ಲುಲ್ಲಾ, ರಾತ್ರಿ ಆಕೆ ಮೇಲೆ ಎರಗಿದ್ದಾನೆ. ಮಹಿಳೆ ಎಚ್ಚರಗೊಂಡು ಚೀರಾಡಿದಾಗ ಆಕೆಯ ಮುಖಕ್ಕೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಶುಕ್ರವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಮಾಲೀಕರು ಬಂದಾಗ ಮಹಿಳೆ ಕೊಲೆಯಾಗಿರುವುದು ಗೊತ್ತಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಅತ್ತ ಅತ್ಯಾಚಾರ ಹಾಗೂ ಕೊಲೆ ಮಾಡಿ ತನಗೆ ಏನೂ ಗೊತ್ತಿಲ್ಲದಂತೆ ಆರೋಪಿ ಅಬ್ದುಲ್ಲಾ ಅದೇ ಮಾರುಕಟ್ಟೆ ಸಂಕೀರ್ಣದ ಎದುರು ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ. ಅಬ್ದುಲ್ಲಾನನ್ನ ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್, ಚಿಕ್ಕಬಳ್ಳಾಪುರ)