ನಾಳೆ ಕೆಪಿಎಸ್ಸಿ ಮರು ಪರೀಕ್ಷೆ: ರೈಲು ವಿಳಂಬವಾಗಿ ಪರೀಕ್ಷೆ ವಂಚಿತ ಅಭ್ಯರ್ಥಿಗಳಿಗೆ ಅವಕಾಶ

KPSC
Published on

ಬೆಂಗಳೂರು: ರೈಲು ವಿಳಂಬದಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್​ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದ ಒಂದು ಪತ್ರಿಕೆಯ ಪರೀಕ್ಷೆ ಬರೆಯಲು ವಂಚಿತರಾಗಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಬುಧವಾರ(ಡಿ.28) ಬೆಂಗಳೂರಿನಲ್ಲಿ ಮರು ಪರೀಕ್ಷೆಯನ್ನು ಆಯೋಜಿಸಿದೆ.

ಲೋಕಸೇವಾ ಆಯೋಗ ನೀಡಿದ್ದ ಕರೆಯಂತೆ 600ಕ್ಕೂ ಅಧಿಕ ಅಭ್ಯರ್ಥಿಗಳು ಮರುಪರೀಕ್ಷೆಗೆ ಅವಕಾಶ ಕೋರಿ ದಾಖಲೆಗಳನ್ನು ಸಲ್ಲಿಸಿದ್ದರು. ಅವುಗಳ ಪರಿಶೀಲನೆ ನಡೆಸಿ ಹೊಸದಾಗಿ ಪ್ರವೇಶ ಪತ್ರ ಡೌನ್​ಲೋಡ್​ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಈವರೆಗೆ ಸುಮಾರು 598 ಅಭ್ಯರ್ಥಿಗಳು ಪ್ರವೇಶ ಪತ್ರ ಪಡೆದಿದ್ದು, ಅವರೆಲ್ಲರೂ ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಯ ಒಂದು ಪತ್ರಿಕೆಯ ಮರು ಪರೀಕ್ಷೆಯನ್ನು ಎಲ್ಲ ಪರೀಕ್ಷೆಗಳಂತೆ ಕಟ್ಟುನಿಟ್ಟಾಗಿ ನಡೆಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗಾಗಿ ಸಕಲ ಸಿದ್ಧತೆಗಳನ್ನು ಆಯೋಗ ಮಾಡಿಕೊಂಡಿದ್ದು, ಕರೊನಾ ಶಿಷ್ಠಾಚಾರ ಸೇರಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net