

ಬೆಂಗಳೂರು: ಬಿಜೆಪಿ ಶಾಸಕಾಂಗ ಸಭೆ ಆರಂಭಕ್ಕೂ ಮುನ್ನ ಹಂಗಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿದರು.
ನೂತನ ಸಿಎಂ ಅನ್ನು ಆಯ್ಕೆ ಮಾಡುವ ಜವಾಬ್ದಾರಿ ಹೈಕಮಾಂಡ್ ಮೇಲಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ಉಸ್ತುವಾರಿ ತಂಡ, ಮೊದಲಿಗೆ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಭೇಟಿ ನೀಡಿತ್ತು.
ಅರುಣ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೆಲಕಾಲ ಬಿಜೆಪಿ ಕಚೇರಿಯಲ್ಲೇ ರಹಸ್ಯ ಮಾತುಕತೆ ನಡೆಸಿದರು. ಬಳಿಕ ಸಂಜೆ 4.45ರ ಸುಮಾರಿಗೆ ಬಿಎಸ್ವೈ ನಿವಾಸಕ್ಕೆ ಅರುಣ್ ಸಿಂಗ್ ಭೇಟಿ ನೀಡಿದರು. ನಳಿನ್ ಕುಮಾರ್ ಕಟೀಲ್, ಗೋವಿಂದ್ ಕಾರಜೋಳ, ವೀರಣ್ಣ ಚರಂತಿ ಮಠ, ವಿಜಯೇಂದ್ರ ಕೂಡ ಆಗಮಿಸಿದರು. ಮುಂದಿನ ಸಿಎಂ ಆಯ್ಕೆ ಬಗ್ಗೆ ಯಡಿಯೂರಪ್ಪ ಅವರ ಸಲಹೆಗೂ ಆದ್ಯತೆ ನೀಡಲಾಗಿದೆ.