ಚನ್ನಪಟ್ಟಣದ ವಂದಾರಗುಪ್ಪೆ ಬಳಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ: ಹತ್ತು ದಿನದಲ್ಲಿ ಟೆಂಡರ್​

Silk cocoon
Published on

ರಾಮನಗರ: ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ರೇಷ್ಮೆ ಇಲಾಖೆ ಆವರಣದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಇದರಿಂದ ರಾಮನಗರ-ಚನ್ನಪಟ್ಟಣ ಅವಳಿ ನಗರದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕನಸು ನನಸಾಗಲಿದೆ. ಜ.27ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದೀಗ ಆದೇಶ ಹೊರಡಿಸಲಾಗಿದೆ.

75 ಕೋಟಿ ರೂ. ವೆಚ್ಚ: ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ. ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್​ನಿಂದ 75 ಕೋಟಿ ರೂ. ಆರ್ಥಿಕ ನೆರವು ಈಗಾಗಲೇ ಬಿಡುಗಡೆ ಆಗಿದೆ.

10 ದಿನಗಳಲ್ಲಿ ಟೆಂಡರ್​: ಮಾರುಕಟ್ಟೆಗೆ ಪ್ರತಿದಿನ 40-50 ಟನ್​ ರೇಷ್ಮೆಗೂಡು ಬರುತ್ತಿದೆ. ಹೈಟೆಕ್​ ಮಾರುಕಟ್ಟೆ ನಿರ್ಮಾಣವಾದ ಬಳಿಕ ಇದರ ಪ್ರಮಾಣ 100-150 ಟನ್​ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಾಗಾಗಿ, 10 ದಿನಗಳಲ್ಲಿ ಟೆಂಡರ್​ ಕರೆದು, ಆದಷ್ಟು ಬೇಗ ಭೂಮಿಪೂಜೆ ನೆರವೇರಿಸಲು ಕ್ರಮ ಕೈಗೊಳ್ಳುವಂತೆ ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾರುಕಟ್ಟೆಯಲ್ಲಿ ಏನೆಲ್ಲ ಇರಲಿದೆ?: ಹೈಟೆಕ್​ ಮಾರುಕಟ್ಟೆಯಲ್ಲಿ ಆಧುನಿಕ ಪ್ರವೇಶದ್ವಾರ, ಗಣಕೀಕೃತ ರೇಷ್ಮೆಗೂಡು ಹರಾಜು ಸಭಾಂಗಣ, ಕೋರ್​ ಕಟ್ಟಡ, ಶೌಚಗೃಹದ ಬ್ಲಾಕ್​, ಅಗ್ನಿಶಾಮಕದಳದ ಕೊಠಡಿ, ವಿದ್ಯುತ್​ ಕೊಠಡಿ, ಪೊಲೀಸ್​ ಚೌಕಿ, ನೀರು ಶೇಖರಣಾ ತೊಟ್ಟಿ, ಒಳಚರಂಡಿ ಸಂಸ್ಕರಣಾ ಘಟಕ, ಕಾಂಪೌಂಡ್​, ಸೋಲಾರ್​ ವ್ಯವಸ್ಥೆ, ಸಿಸಿ ಕ್ಯಾಮರಾ, ಹವಾನಿಯಂತ್ರಣ ವ್ಯವಸ್ಥೆ, ಆಂತರಿಕ ರಸ್ತೆಗಳು, ಜನರೇಟರ್​ ಮತ್ತಿತರ ಸೌಲಭ್ಯಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net