

ಸೋಮವಾರಪೇಟೆ: ಡಾ.ಬಿ.ಆರ್. ಅಂಬೇಡ್ಕರ್ ಗುಣಗಾನ ಮಾಡಿದ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಜೀವ ಬೆದರಿಕೆ ಹಾಕಿದ ಘಟನೆ ಕೊಡಗು ಜಿಲ್ಲೆ ಸೋಮವಾರಪಟೆ ತಾಲೂಕಿನಲ್ಲಿ ಸಂಭವಿಸಿದೆ.
ಕುಶಾಲನಗರದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಏ.14ರಂದು ಆಯೋಜಿಸಿದ್ದ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಅಭಿಲಾಶ್ ಭಾಷಣ ಮಾಡಿದ್ದ. ಈ ಬಗೆಗಿನ ಭಾಷಣದ ವಿಡಿಯೋ ತುಣುಕನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಲಾಷ್ಗೆ ದೂರವಾಣಿ ಕರೆ ಮಾಡಿದ ಸೋಮವಾರಪಟೆಯ ಕಲ್ಕಂದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಧರ್ಮರಾಜ್, ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜೀವ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಇವರ ಮೊಬೈಲ್ ಸಂಭಾಷಣೆ ವೈರಲ್ ಆಗಿತ್ತು.
ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ಅಭಿಲಾಷ್ ಹಿಂದೇಟು ಹಾಕಿದ್ದರಿಂದ ವಿದ್ಯಾರ್ಥಿಯು ಭಯದಲ್ಲಿ ಇರಬೇಕಾಗಿದೆ ಎಂಬ ವರದಿ ಆಧಾರದ ಮೇಲೆ ಶಿಕ್ಷಕನನ್ನು ಕೆಲಸದಿಂದ ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶ ವೇದಮೂರ್ತಿ ಆದೇಶಿಸಿದ್ದಾರೆ.