

ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 920 ದಾಟಿದೆ. ನೂರಾರು ಮಂದಿ ಗಾಯಗೊಂಡಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನೂರಾರು ಮನೆಗಳು ಧ್ವಂಸಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂದ್‌ಜಾದಾ ಹೇಳಿದ್ದಾರೆ.
ಅಫ್ಘಾನಿಸ್ತಾನದ ಆಗ್ನೇಯ ಭಾಗದ ಖೋಸ್ಟ್ ನಗರದಿಂದ ಸುಮಾರು 44 ಕಿಮೀ ವ್ಯಾಪ್ತಿ ಪ್ರದೇಶದವರೆಗೂ ಭೂಕಂಪ ಆಗಿದ್ದು, ನೂರಾರು ಜನರು ಅವಶೇಶಗಳ ಅಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ನಿದ್ರೆಗೆ ಜಾರಿದ ನೂರಾರು ಮಂದಿ ಬೆಳಗಾಗುವಷ್ಟರಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮ ಮಲಗಿದಲ್ಲೇ ಚಿರನಿದ್ರೆಗೆ ಜಾರಿದ್ದಾರೆ.
ರಿಕ್ಟರ್ ಮಾಪನದಲ್ಲಿ ಭೂಕಂಪದ ತೀವ್ರತೆ 6.1 ದಾಖಲಾಗಿದೆ. ಸಾವಿರಾರು ಮನೆಗಳು ಭೂ ಸಮಾಧಿಯಾಗಿದ್ದು, ಪ್ರಾಣ ಹಾನಿ-ಆಸ್ತಿ ಹಾನಿ ಇನ್ನೂ ಅಂದಾಜಿಗೆ ಸಿಕ್ಕಿಲ್ಲ.