ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್​ಗಳ ಶುಲ್ಕ ಹೆಚ್ಚಳ

Ashwath Narayan
Published on

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವೃತ್ತಿಪರ ವ್ಯಾಸಂಗಗಳ ಪ್ರವೇಶಕ್ಕೆ ಮುಂದಿನ ವರ್ಷದಿಂದ ಕಾಮೆಡ್-ಕೆ ಇರುವುದಿಲ್ಲ. ಸಿಇಟಿಯಲ್ಲಿ ಕಾಮೆಡ್-ಕೆ ವಿಲೀನಗೊಳಿಸಿ  ಒಂದೇ ಪರೀಕ್ಷೆ ನಡೆಸಲು ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ (ಕುಪೆಕಾ) ಸಹಮತ ವ್ಯಕ್ತಪಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರಕಟಿಸಿದರು.

ವಿಕಾಸಸೌಧದಲ್ಲಿ ಕುಪೆಕಾ ಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳ ಜಂಟಿ ಸಭೆಯ ಬಳಿಕ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅಶ್ವತ್ಥ ನಾರಾಯಣ, ವಿಲೀನ ವಿಧಿ-ವಿಧಾನ, ಒಂದೇ ಪರೀಕ್ಷೆ ವಿಧಾನ, ಪರಸ್ಪರ ತಿಳಿವಳಿಕೆ ಪತ್ರ ಸಿದ್ಧತೆ ಮುಂತಾದ ಪೂರ್ವಭಾವಿ ಪ್ರಕ್ರಿಯೆಗಳನ್ನು ಇಲಾಖೆ ನಿರ್ವಹಿಸಲಿದ್ದು,‌ ಒಪ್ಪಂದದ ಬಳಿಕ ಜಾರಿಗೆ ತರಬೇಕಿರುವ ಕಾರಣ ಕಾಲಾವಕಾಶ ಹಿಡಿಯಲಿದ್ದು, ಮುಂದಿನ ವರ್ಷದಿಂದ ಜಾರಿಯಾಗಲಿದೆ ಎಂದು ತಿಳಿಸಿದರು.

ಶುಲ್ಕ ಹೆಚ್ಚಳ: ಎರಡು ವರ್ಷಗಳ ಬಳಿಕ ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ವ್ಯಾಸಂಗಗಳಿಗೆ ಶೇ.10 ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಲಾಗಿದ್ಸು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಶುಲ್ಕ ಅನುಷ್ಠಾನಕ್ಕೆ ಬರಲಿದೆ.

ವಿವಿಧ ಕಾರಣಗಳನ್ನು ಮುಂದಿಟ್ಟು ಶೇ.25 ಶುಲ್ಕ ಏರಿಕೆಗೆ ಕುಪೆಕಾ ಮನವಿ ಮಾಡಿತು. ಆದರೆ, ಸಮಿತಿ ವರದಿ ಪ್ರಕಾರ ಶೇ.10‌ ಏರಿಕೆಗೆ ಅವಕಾಶವಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದು, ಕುಪೆಕಾ ಒಪ್ಪಿಕೊಂಡಿದೆ. ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವುದಿಲ್ಲ. ಹೆಚ್ಚುವರಿ ವಸೂಲಿ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಕ್ಕೆ ಸಮ್ಮತಿಸಿದೆ‌ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net