

ಕೋಲಾರ: ಮೀಸಲಾತಿ ಹೆಚ್ಚಿಸದಿರುವ ಬಗ್ಗೆ ಒಕ್ಕಲಿಗರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ವಿಧಾನಸೌಧದ ಒಳಗೆ, ಹೊರಗೆ ಮತ್ತು ಕಾನೂನು ಸಮರಕ್ಕೆ ಸಜ್ಜಾಗಬೇಕೆಂಬ ಅಭಿಪ್ರಾಯ ಸಮುದಾಯದಲ್ಲಿ ಮೂಡುತ್ತಿದೆ. 1993ರಂತೆ ಮತ್ತೊಂದು ಹೋರಾಟಕ್ಕೆ ಕರೆದರೆ ಬರಲು ಸಿದ್ಧರಿರಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ಕೋಲಾರದಲ್ಲಿ ಸೋಮವಾರ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಕಾನೂನು ಮಿತಿ ದಾಟಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದಾದರೆ ಶೇ.16ರಷ್ಟಿರುವ ಒಕ್ಕಲಿಗ ಸಮುದಾಯಕ್ಕೆ ಪ್ರಸ್ತುತ ಶೇ.4 ಮೀಸಲಾತಿ ಒದಗಿಸಿದ್ದು, ಇದನ್ನು ಶೇ.12ಕ್ಕೆ ಏರಿಸಬೇಕು ಎಂಬ ಬೇಡಿಕೆ ಸಮುದಾಯದಲ್ಲಿದೆ. ಸಮುದಾಯದ ಮೇಲೆ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದ್ದೇ ಆದರೆ 1993ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ರೂಪಿಸಿದಂತೆ ಮತ್ತೊಂದು ಐತಿಹಾಸಿಕ ಹೋರಾಟ ರೂಪುಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಹೋರಾಟಕ್ಕೆ ಕರೆ ಕೊಟ್ಟಾಗ ಸಮುದಾಯದ ಎಲ್ಲರೂ ಸಹಸ್ರ ಸಂಖ್ಯೆಯಲ್ಲಿ ಬರಬೇಕು ಎಂದರು.
ಮೀಸಲಾತಿ ಅತ್ಯಗತ್ಯ: ಒಕ್ಕಲಿಗರು ಬರುವ ಪ್ರವರ್ಗ 3ಎ ದಲ್ಲಿ ಕೊಡವ, ಭಂಟ, ರೆಡ್ಡಿ ಮತ್ತು ಬಲಿಜ ಸಮುದಾಯ ಸೇರಿ ಹಲವು ಜಾತಿಗಳಿವೆ. ಶೇ. 4ರಷ್ಟಿರುವ ಮೀಸಲಾತಿಯಲ್ಲಿ ಶೇ.20 ಜನಸಂಖ್ಯೆ ಹಂಚಿಕೊಳ್ಳುವಂತಾಗಿದೆ. ಇದರಲ್ಲಿ ಶೇ.1.5 ಮಾತ್ರ ಒಕ್ಕಲಿಗರಿಗೆ ಸಿಗುತ್ತಿದೆ. ಈ ಅನ್ಯಾಯ ಸರಿಪಡಿಸಲು ಕೂಡಲೇ ಸರ್ಕಾರ ಮುಂದಾಗಬೇಕು. ಅಂಬೇಡ್ಕರ್ ಆಶಯವಾದ ಸಾಮಾಜಿಕ ನ್ಯಾಯ ಒಕ್ಕಲಿಗ ಬಡವರಿಗೂ ಸಿಗಬೇಕು. ಮುಂದಿನ ಪೀಳಿಗೆ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದುವರಿಯಲು ಮೀಸಲಾತಿ ಅತ್ಯಗತ್ಯ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಇತರ ಸಮುದಾಯದವರಿಗೆ ಸರ್ಕಾರ ಮೀಸಲಾತಿ ಒದಗಿಸುತ್ತಿರುವುದಕ್ಕೆ ನಮ್ಮ ವಿರೋಧವಿಲ್ಲ. ಸರ್ಕಾರ ಮೀಸಲಾತಿ ಹೆಚ್ಚಿಸುತ್ತಿರುವ ವೇಗ ಗಮನಿಸಿದರೆ ಶೇ.200 ಮೀಸಲಾತಿ ನೀಡಬೇಕಾಗಬಹುದೇನೋ. ಒಕ್ಕಲಿಗರ ಮೀಸಲಾತಿ ಶೇ.12ಕ್ಕೆ ಏರಿಸದಿದ್ದರೆ ಮತ್ತೊಂದು ಐತಿಹಾಸಿಕ ಹೋರಾಟ ನಿಶ್ಚಿತ. ಸಂವಿಧಾನದ ಆಶಯಕ್ಕೆ ಧಕ್ಕೆ ತಂದರೆ ನಮಗೆ ಅನ್ಯಾಯವಾಗುತ್ತದೆ ಎಂದರು.