ಪಿಎಂ ಕಿಸಾನ್ ಸಮ್ಮಾನ್​ ನಿಧಿ: ರಾಜ್ಯದ 50.36 ಲಕ್ಷ ರೈತರಿಗೆ ಸಹಾಯಧನ ಮಂಜೂರು

KISAN-SAMMAN-NIDHI-blog
Published on

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ 12ನೇ ಕತ್ತಿನ ಹಣ ಬಿಡುಗಡೆಯಾಗಿದೆ. 2022-23ನೇ ಸಾಲಿನ ಆಗಸ್ಟ್​ನಿಂದ ನವೆಂಬರ್​ವರೆಗೆ ಕಂತಿನ ಸಹಾಯಧನವು ರಾಜ್ಯದ 50.36 ಲಕ್ಷ ಅರ್ಹ ರೈತರಿಗೆ ಒಟ್ಟು 1007.26 ಕೋಟಿ ರೂ. ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದ್ದಾರೆ.

ಈ ಯೋಜನೆಯಡಿ 2018-19 ರಿಂದ 2022-23ರವರೆಗೆ ಕೇಂದ್ರ ಸರ್ಕಾರ‌ 9968.57 ಕೋಟಿ ರೂ.‌ ಹಾಗೂ ರಾಜ್ಯ ಸರ್ಕಾರ 4821.37 ಕೋಟಿ ರೂ. ಸಹಾಯಧನ ಪಾವತಿಸಿದ್ದು, 53.83 ಲಕ್ಷ‌ ರೈತ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ತಿಳಿಸಿದ್ದಾರೆ.

ಒಂದೇ ಸೂರಿನಡಿ ಪರಿಕರ: ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ( ಒನ್ ಸ್ಟಾಪ್ ಒನ್ ಶಾಪ್ )ದಲ್ಲಿ ರೈತರಿಗೆ ರಸಗೊಬ್ಬರ, ಕೀಟನಾಶಕಗಳ ಜತೆಗೆ ಅಗತ್ಯ ಸೇವೆಗಳು ಇನ್ನು ಮುಂದೆ ಲಭಿಸಲಿವೆ. ರೈತರಿಗೆ ಒಂದೇ ಸೂರಿನಡಿ ಈ ಸೌಕರ್ಯ ಒದಗಿಸಲೆಂದು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾಮಟ್ಟದ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಗಳನ್ನು ಒನ್ ಸ್ಟಾಪ್, ಒನ್ ಶಾಪ್ ಗಳನ್ನಾಗಿ ಪರಿವರ್ತಿಸಲು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವಾಲಯ ತೀರ್ಮಾನಿಸಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಈ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರ, ಕೀಟನಾಶಕಗಳು, ‌ಬಿತ್ತನೆ ಬೀಜ, ‌ಕೃಷಿ ಪರಿಕರ ಸಕಾಲದಲ್ಲಿ ಒದಗಿಸಲಾಗುತ್ತದೆ. ಅಲ್ಲದೆ, ರಸಗೊಬ್ಬರ, ಕೀಟನಾಶಕಗಳು, ಮಣ್ಣು ವಿಶ್ಲೇಷಣೆ, ಸಂಬಂಧಿಸಿದ ಇಲಾಖೆಗಳ, ಸುಧಾರಿತ ಬೇಸಾಯ ಕ್ರಮಗಳ ಮಾಹಿತಿ, ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಾಗಲಿವೆ. ಮೊದಲ ಹಂತದಲ್ಲಿ ದೇಶಾದ್ಯಂತ 600 ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಕಾರ್ಯಾರಂಭಿಸಿದ್ದು, ಇದರಲ್ಲಿ ಕರ್ನಾಟಕದ 43 ಕೇಂದ್ರಗಳು ಸೇರಿವೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡಗಡೆಯ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು. ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳು ಕಾರ್ಯಕ್ರಮವನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net