ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ​ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ

Ramya
Published on

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ಸಿನಿಮಾರಂಗ ಹಾಗೂ ರಾಜಕೀಯ ಎರಡಕ್ಕೂ ಗುಡ್ ಬೈ ಹೇಳಿದ್ದಾರೆ.

ರಮ್ಯಾ ಅಭಿನಯದ ಮೊದಲ ಸಿನಿಮಾ 'ಅಭಿ' ತೆರೆಕಂಡು ಕಳೆದ ಭಾನುವಾರಕ್ಕೆ 18 ವರ್ಷ ಪೂರೈಸಿತು. ಈ ಹಿನ್ನೆಲೆಯಲ್ಲಿ ರಮ್ಯಾ, ಭಾನುವಾರ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ಆಗ ಅಭಿಮಾನಿಗಳು ಮತ್ತೆ ನಟನೆಗೆ ಮರಳುವುದು ಯಾವಾಗ? ಎಂದು ಪ್ರಶ್ನಿಸಿದ್ದು, 'ನಟನೆ ಎಂಬ ಹಡಗು ಮುಳುಗಿ ತುಂಬ ದಿನಗಳೇ ಕಳೆದು ಹೋಗಿವೆ. ಸಿನಿಮಾ ಮೇಲಿನ ಆಸೆಯನ್ನು ಕಳೆದುಕೊಂಡಿದ್ದೇನೆ' ಎನ್ನುವ ಮೂಲಕ ಇನ್ನೆಂದೂ ಮತ್ತೆ ಬಣ್ಣದ ಲೋಕಕ್ಕೆ ಬರಲ್ಲ ಎಂದಿದ್ದಾರೆ. ನನಗೆ ನಟಿಸಲು ಆಸಕ್ತಿಯೂ ಇಲ್ಲ ಎಂದಿದ್ದಾರೆ. ನಟಿ ರಮ್ಯಾ ನಟನೆಯಿಂದ ದೂರ ಉಳಿದು ಹಲವು ವರ್ಷ ಕಳೆದಿವೆ. 2016ರಲ್ಲಿ ಕೋಡಿ ರಾಮಕೃಷ್ಣ ನಿರ್ದೇಶನದ 'ನಾಗರಹಾವು' ಚಿತ್ರವೇ ಅವರ ಕಡೆಯ ಸಿನಿಮಾ. ಸಿನಿಮಾ ಮಾತ್ರವಲ್ಲ, ರಾಜಕೀಯದಿಂದಲೂ ರಮ್ಯಾ ತುಂಬಾ ದೂರ ಹೋಗಿರುವ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿರಿ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳು ಗ್ರಾಮದ ಜಮೀನೊಂದರಲ್ಲಿ ಶವವಾಗಿ ಪತ್ತೆ! ಆ ರಾತ್ರಿ ಆಗಿದ್ದೇನು?

ಕೆಲ ವರ್ಷಗಳ ಹಿಂದೆ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿದ್ದ ರಮ್ಯಾ, ಲೋಕಸಭೆ ಚುನಾವಣೆ ಬಳಿಕ ಎಲ್ಲಿದ್ದಾರೆ? ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಕೆಲ ವಿಷಯಗಳನ್ನ ಹಂಚಿಕೊಳ್ಳುತ್ತಿರುತ್ತಾರಷ್ಟೆ. ಭಾನುವಾರದ ಸಂವಾದದಲ್ಲಿ 'ನನ್ನ ರಾಜಕೀಯದ ಸಮಯವೂ ಮುಗಿದಿದೆ' ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ.

ಮಂಡ್ಯ ಸಂಸದೆಯಾಗಿದ್ದ ವೇಳೆ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ರಮ್ಯಾ, ಸದ್ದಿಲ್ಲದೆ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದಾರೆ. ಜತೆಗೆ ಚಿತ್ರರಂಗಕ್ಕೂ ಗುಡ್‍ಬೈ ಹೇಳಿದ್ದಾರೆ. ಕೆಲವರು ರಮ್ಯಾರ ಈ ನಿರ್ಧಾರಕ್ಕೆ ಆಕ್ಷೇಪಿಸಿದ್ದು, ಮತ್ತೆ ಚಂದನವನಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net