ಪುನೀತ್​ ಅಗಲಿಕೆ ನೋವು ತಾಳಲಾರದೆ ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ

death
Published on

ಚನ್ನಪಟ್ಟಣ: ನಟ ಪುನೀತ್​ ರಾಜ್​ಕುಮಾರ್ ಅವರ ಅಗಲಿಕೆ ನೋವನ್ನು ತಾಳಲಾರದೆ ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುನೀತ್​ ನಿಧನರಾಗಿ 6 ದಿನ ಕಳೆದರೂ ಅಭಿಮಾನಗಳ ದುಃಖ, ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಇಂತಹ ವಿಷಾದನೀಯ ಸ್ಥಿತಿಯಲ್ಲಿ ಅಭಿಮಾನಿಗಳು ಧೈರ್ಯಗೆಡಬಾರದು, ತಾಳ್ಮೆ ತಂದುಕೊಳ್ಳಬೇಕು. ಪುನೀತ್​ ಅವರು ಎಂದೂ ಇಂತಹದ್ದನ್ನು ಸಹಿಸಲ್ಲ ಎಂದು ಸ್ವತಃ ಶಿವರಾಜ್​ಕುಮಾರ್ ಮತ್ತು ರಾಘವೇಂದ್ರ ರಾಜ್​ಕುಮಾರ್​ ಪದೇಪದೆ ಮನವಿ ಮಾಡುತ್ತಿದ್ದರೂ ಅಭಿಮಾನಿಗಳ ಆತ್ಮಹತ್ಯೆ ಪ್ರಕರಣ ಮುಂದುವರಿದಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಎಲೆಕೇರಿ ನಿವಾಸಿ ವೆಂಕಟೇಶ್(25) ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ಈತ, ತನ್ನ ಕೈ ಮೇಲೆ 'ಪವರ್​ ಸ್ಟಾರ್​' ಎಂದು ಟ್ಯಾಟೂ ಹಾಕಿಸಿಕೊಂಡಿದ್ದ. ಕ್ಷೌರಿಕ ವೃತ್ತಿ ಮಾಡ್ತಿದ್ದ ವೆಂಕಟೇಶ್, ಪುನೀತ್​ ಅವರನ್ನ ಭೇಟಿ ಮಾಡಿ ಫೋಟೋವನ್ನೂ ತೆಗೆಸಿಕೊಂಡು ಸಂಭ್ರಮಿಸಿದ್ದ. ಅ.29ರಂದು ಪುನೀತ್​ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತಗೊಂಡಿದ್ದ. ಅಂತ್ಯಸಂಸ್ಕಾರದ ಬಳಿಕ ಖಿನ್ನತೆಗೆ ಒಳಗಾಗಿದ್ದ. ಊಟ ಬಿಟ್ಟು ಕಣ್ಣೀರಿಡುತ್ತಿದ್ದ.

ಪವರ್​ ಸ್ಟಾರ್​ ಎಂದು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ವೆಂಕಟೇಶ್​
ಪವರ್​ ಸ್ಟಾರ್​ ಎಂದು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ವೆಂಕಟೇಶ್​

ಗುರುವಾರ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನ ಆತ್ಮಹತ್ಯೆಯಿಂದ ಕಂಗಾಲಾಗಿರುವ ಪೋಷಕರು, ಮಗನ ನೇತ್ರದಾನಕ್ಕೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net