ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು... ಇನ್ನಿಬ್ಬರ ಸ್ಥಿತಿ ಚಿಂತಾಜನಕ

death case
Published on

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿ ಸೋಮಯಾಜಲಹಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಿಡಿಲಿಗೆ ಬಲಿಯಾಗಿದ್ದಾರೆ.

ಅಂಬರೀಷ್ ಇವರ ಪುತ್ರ ಗೌತಮ್, ಮಗಳಾದ ವಾಣಿಶ್ರೀ, ಲಾವಣ್ಯ ಮೃತರು. ಕಳೆದ ಬುಧವಾರ (ಏ.21) ಜಿಲ್ಲೆಯಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗಿತ್ತು. ಅಂದು ರಾತ್ರಿ ಅಂಬರೀಷ್​ ಅವರ ಕಲ್ಲುಚಪ್ಪಡಿ ಮನೆಗೆ ಸಿಡಿಲು ಬಡಿದಿತ್ತು. ಪರಿಣಾಮ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿ ಗಂಭೀರ ಗಾಯಗೊಂಡಿದ್ದರು. ಅಂಬರೀಷ್, ಪತ್ನಿ ಗಾಯತ್ರಮ್ಮ, ಮಕ್ಕಳಾದ ವಾಣಿಶ್ರೀ, ಲಾವಣ್ಯ, ದರ್ಶನ್, ಗೌತಮ್ ಮತ್ತು ಅಂಬರೀಷ್ ಅವರ ತಂದೆ ಜಗನ್ ಅವರ ಸ್ಥಿತಿ ಚಿಂತಾಜನಕವಾಗಿತ್ತು.

ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಏ.25ರಂದು 4 ವರ್ಷದ ಬಾಲಕ ಗೌತಮ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಅದೇ ದಿನ ಸಂಜೆ ತಂದೆ ಅಂಬರೀಷ್ ಕೂಡ ಕೊನೆಯುಸಿರೆಳೆದಿದ್ದರು. ಮರುದಿನ ಮಗಳು ವಾಣಿಶ್ರೀ ಮೃತಪಟ್ಟಳು. ನಿನ್ನೆ ರಾತ್ರಿ(ಏ.27) ಲಾವಣ್ಯ ಕೊನೆಯುಸಿರೆಳೆದಳು. ಇನ್ನು ಉಳಿದ ಮೂವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯತ್ರಮ್ಮ, ದರ್ಶನ್, ಜಗನ್​ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net